ಪಾಳುಬಿದ್ದ ವಾಣಿಜ್ಯ ಸಂಕೀರ್ಣ: ನಗರಸಭೆಯ ನಿರ್ಲಕ್ಷ್ಯಕ್ಕೆ ಆಕ್ರೋಶ

ಮಣಿಪಾಲ, ನ.5: ಮಣಿಪಾಲ ಸಿಂಡಿಕೇಟ್ ವೃತ್ತದಿಂದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮುಖ್ಯ ರಸ್ತೆಯಲ್ಲಿರುವ ನಗರಾಡಳಿತದ ವಾಣಿಜ್ಯ ಸಂಕೀರ್ಣ ಬಳಕೆಯಾಗದೆ ಪಾಳುಬೀಳುವ ಸ್ಥಿತಿಗೆ ತಲುಪಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ವೆಚ್ಚ ಮಾಡಿ ನಿರ್ಮಿಸಿರುವ ಈ ಕಟ್ಟಡವು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೆ ಬಹಳ ಸಮಯದಿಂದ ಬೀಗಮುದ್ರೆ ಹಾಕಿಕೊಂಡಿರುವುದು ಸಾರ್ವಜನಿಕ ವಲಯ ದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಟ್ಟಡದ ಅಂಗಡಿಗಳ ಶೆಟರ್‌ಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿದ್ದು, ಗೋಡೆಗಳಿಗೆ ಬಳಿದ ಬಣ್ಣವೂ ಮಾಸಲಾ ರಂಭಿಸಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಿರುವ ಈ ಕಟ್ಟಡವು ಜನರ ಉಪಯೋಗಕ್ಕೆ ಬಾರದೆ ಹಾಳಾಗುತ್ತಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಲಾಗಿದೆ.
ಈ ವಾಣಿಜ್ಯ ಸಂಕೀರ್ಣವು ಜನಸಂಪರ್ಕವಿರುವ ಪ್ರಮುಖ ಸ್ಥಳದಲ್ಲಿದ್ದು, ವ್ಯಾಪಾರ ವಹಿವಾಟಿಗೆ ಅತ್ಯಂತ ಸೂಕ್ತ ವಾಗಿದೆ. ಇಲ್ಲಿ ಅಂಗಡಿ ಮುಂಗಟ್ಟುಗಳು ಆರಂಭಗೊಂಡರೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಸಮೀಪ ದಲ್ಲೇ ಲಭ್ಯವಾಗಲಿವೆ. ಸಣ್ಣ ವ್ಯಾಪಾರಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉದ್ಯೋಗಾವಕಾಶ ದೊರೆಯ ಲಿದೆ. ಅಲ್ಲದೆ, ನಗರಸಭೆಗೂ ಬಾಡಿಗೆ ರೂಪದಲ್ಲಿ ಆದಾಯ ಲಭಿಸಲಿದೆ. ಹೀಗಿರುವಾಗ ಕಟ್ಟಡವನ್ನು ನಿರುಪಯು ಕ್ತವಾಗಿ ಉಳಿಸಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜಸೇವಕ ನಿತ್ಯಾನಂದ ಒಳಕಾಡು, ನಗರಸಭೆಯ ಅಧಿಕಾರಿಗಳು ಕೂಡಲೇ ವಾಣಿಜ್ಯ ಸಂಕೀರ್ಣವನ್ನು ಸಾರ್ವಜನಿಕರ ಅನುಕೂಲಕ್ಕೆ ಮುಕ್ತಗೊಳಿಸಿ, ಅಂಗಡಿಗಳ ಹರಾಜು ಅಥವಾ ಬಾಡಿಗೆ ಪ್ರಕ್ರಿಯೆ ಮೂಲಕ ವ್ಯಾಪಾರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು. ಕೋಟ್ಯಂತರ ರೂಪಾಯಿ ವೆಚ್ಚದ ಸಾರ್ವಜನಿಕ ಆಸ್ತಿ ಹಾಳಾಗಲು ಬಿಡಬಾರದು ಎಂದು ಆಗ್ರಹಿಸಿದ್ದಾರೆ.
ಇದಲ್ಲದೆ, ಉಡುಪಿ ಜಿಲ್ಲೆಯಲ್ಲಿ ಸರಕಾರದ ವತಿಯಿಂದ ನಿರ್ವಹಿಸಲ್ಪಡುವ ಭಿಕ್ಷುಕರ ಪುನರ್ವಸತಿ ಕೇಂದ್ರ ಹಾಗೂ ನಿರ್ಗತಿಕರ ಆಶ್ರಯ ತಾಣಗಳ ಕೊರತೆಯಿರುವುದನ್ನು ಗಮನಿಸಬೇಕಾಗಿದೆ. ವಾಣಿಜ್ಯ ಉದ್ದೇಶಕ್ಕೆ ಕಟ್ಟಡವನ್ನು ಬಳಸಲು ಸಾಧ್ಯವಾಗದಿದ್ದಲ್ಲಿ, ಪರ್ಯಾಯವಾಗಿ ಅಸಹಾಯಕರು, ನಿರ್ಗತಿಕರು ಹಾಗೂ ಆಶ್ರಯವಿಲ್ಲದವರ ನೆಲೆಯಾಗಿ ಈ ಕಟ್ಟಡವನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಆಡಳಿತ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.






