ಮರವಂತೆ ಬಿಲ್ಲವ ಸಂಘದ ಸಮುದಾಯ ಭವನಕ್ಕೆ ಶಿಲನ್ಯಾಸ

ಕುಂದಾಪುರ, ನ.5: ಮರವಂತೆಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ನೂತನ ಸಮುದಾಯ ಭವನ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಗುರುವಾರ ಮರವಂತೆಯಲ್ಲಿ ನಡೆಯಿತು.
ಗುದ್ದಲಿ ಪೂಜೆ ನೆರವೇರಿಸಿದ ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಕಟ್ಟಡಕ್ಕಾಗಿ ಎಲ್ಲ ಪ್ರಯತ್ನವನ್ನು, ಸಹಕಾರವನ್ನು ನೀಡಲಾಗುವುದು. ನನಗೆ ಸಮಾಜದ ಋಣವಿದೆ. ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ, ಸರಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದರು.
ಕುಂದಾಪುರ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಬೈಂದೂರು ಭಾಗದಲ್ಲಿ ಬಿಲ್ಲವ ಸಮುದಾಯ ಯಾವುದೇ ಕಟ್ಟಡ, ನಿವೇಶನ ಇಲ್ಲ ಅನ್ನುವ ಕೊರಗು ಇತ್ತು. ಆ ಕೊರತೆ ನೀಗಿಸುವ ನಿಟ್ಟಿನಲ್ಲಿ ಮರವಂತೆಯ ಈ ಸಮುದಾಯ ಭವನ ಸಹಕಾರಿಯಾಗಲಿದೆ. ಇಂತಹ ಭವನ ನಿರ್ಮಿಸುವುದು ಸಮಾಜದ ಎಲ್ಲರ ಕರ್ತವ್ಯ. ದಾನಿಗಳ ಸಹಕಾರದಿಂದ ಈ ಕಟ್ಟಡ ಶೀಘ್ರ ನಿರ್ಮಾಣಗೊಂಡು ಸಮಾಜದ ಪ್ರತಿಯೊಬ್ಬರಿಗೂ ಈ ಸಮುದಾಯ ಭವನ ನೆರವಾಗಲಿ ಎಂದರು.
ಬೈಂದೂರು ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ಮಾತನಾಡಿದರು. ದುಬೈ ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಮರವಂತೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ವಹಿಸಿದ್ದರು.
ಪ್ರಮುಖರಾದ ಶಂಕರ ಬಿಲ್ಲವ, ಸತೀಶ್ ಪೂಜಾರಿ, ಪುಟ್ಟಯ್ಯ ಪೂಜಾರಿ, ಸಂಜೀವ ಪೂಜಾರಿ, ಚಂದ್ರ ಪೂಜಾರಿ, ಸೋಮಯ್ಯ ಬಿಲ್ಲವ, ಅಣ್ಣಯ್ಯ ಪೂಜಾರಿ, ಉಪ್ಪುಂದ ಮೀನುಗಾರರ ಸೊಸೈಟಿ ಅಧ್ಯಕ್ಷ ನಾಗೇಶ್ ಖಾರ್ವಿ, ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ತಿಮ್ಮ ದೇವಾಡಿಗ, ಕಾರ್ಯದರ್ಶಿ ಶ್ಯಾಮಲಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಗಣೇಶ್ ಪೂಜಾರಿ ಸ್ವಾಗತಿಸಿದರು. ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಪೂಜಾರಿ ಮರವಂತೆ ವಂದಿಸಿದರು.






