ಕಾಡು, ನಾಡು ಪ್ರತ್ಯೇಕಿಸುವ ಜಂಟಿ ಸರ್ವೆ ಅಗತ್ಯ: ಸಂಸದ ಕೋಟ
‘ಕುಮ್ಕಿ, ಕಸ್ತೂರಿರಂಗನ್ ವರದಿ, ಕಾಡುಪ್ರಾಣಿಗಳ ಹಾವಳಿ’ ವಿಚಾರ ಸಂಕಿರಣ

ಉಡುಪಿ, ನ.5: ಮಾದವ ಗಾಡ್ಗಿಲ್ ವರದಿಗೆ ಹೋಲಿಸಿದರೆ ಕಸ್ತೂರಿ ರಂಗನ್ ವರದಿ ಸ್ವಲ್ಪ ನೀರಾಳತೆಯನ್ನು ತಂದುಕೊಟ್ಟಿದೆ. ಆದರೂ ಈ ವರದಿ ಯಿಂದ ಸಾಮಾನ್ಯ ಜನರಿಗೆ ಹಾಗೂ ರೈತರಿಗೆ ಬದುಕು ನಡೆಸದ ಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಕಾಡು ಮತ್ತು ನಾಡನ್ನು ಪ್ರತ್ಯೇಕಿಸಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘದ ಜಂಟಿ ಸಹಯೋಗದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಗುರುವಾರ ಆಯೋಜಿಸ ಲಾದ ಕುಮ್ಕಿ ಹಾಗೂ ಗೇರು ಲೀಸ್ ಭೂಮಿ, ಕಸ್ತೂರಿ ರಂಗನ್ ವರದಿ ಮತ್ತು ಕಾಡುಪ್ರಾಣಿಗಳ ಹಾವಳಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಸ್ತೂರಿ ರಂಗನ್ ವರದಿಯನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡು ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಸಿ, ಮುಂದಿನ ಜನಾಂಗಕ್ಕೆ ಪರಿಸರ ಉಳಿಸುವಂತೆ ಮತ್ತು ಜನಜೀವನಕ್ಕೆ ತೊಂದರೆಯಾಗದಂತೆ ನ್ಯಾಯಯುತ ವಾದ ಸರ್ವಾನುಮತದ ನಿರ್ಣಯವನ್ನು ಈ ಸಭೆಯ ಮೂಲಕ ಮಾಡಿದರೆ ಜನಪ್ರತಿನಿಧಿಗಳಿಗೆ ಸರಕಾರದ ಮೇಲೆ ಒತ್ತಡ ಹಾಕಲು ಸಾಕಷ್ಟು ಅನುಕೂಲ ಆಗುತ್ತದೆ. ಅದೇ ರೀತಿ ಕಾಡುಪ್ರಾಣಿ ಹಾವಳಿ ಬಗ್ಗೆ ಜಿಲ್ಲೆಯ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿ ಕುರಿತು ವೈದ್ಯ ಹಾಗೂ ಪ್ರಗತಿಪರ ಕೃಷಿಕ ಡಾ.ಅತುಲ್ ಕುಮಾರ್ ಶೆಟ್ಟಿ ಚಿತ್ತೂರು ಮಾತನಾಡಿ, ಕಸ್ತೂರಿ ರಂಗನ್ ವರದಿಯಲ್ಲಿ 10 ಕಿ.ಮೀ. ವ್ಯಾಪ್ತಿಯ ಜಾಗವನ್ನು ಸೂಕ್ಷ್ಮ ಪರಿಸರ ವಲಯ ಎಂಬುದು ಘೋಷಿಸಲಾಗಿತ್ತು. ಈ ಬಗ್ಗೆ ಕೇಂದ್ರ ಸರಕಾರದ ಪ್ರಯತ್ನದಿಂದ ಅದು ಒಂದು ಕಿ.ಮೀ.ಗೆ ಸೀಮಿತವಾಗಿದೆ. ರಾಜ್ಯ ಸರಕಾರಕ್ಕೆ ಪ್ರಯತ್ನ ಪಟ್ಟರೆ ಅದನ್ನು ಶೂನ್ಯಕ್ಕೆ ತರಬಹುದು. ಆದರೆ ಈ ವಿಚಾರದಲ್ಲಿ ರಾಜ್ಯ ಸರಕಾರ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದರು.
ಪರಿಸರ ಸೂಕ್ಷ್ಮ ವಲಯ ಮತ್ತು ಪ್ರದೇಶ ಘೋಷಣೆಯಿಂದ ನಮಗೆ ನಿರ್ಬಂಧಿತ ಕೆಲಸ ಮಾಡಲು ಇಲ್ಲ. ಮನೆಯ ಕಂಪೌಂಡ್ ನಿರ್ಮಾಣಕ್ಕೂ ಅನುಮತಿ ಪಡೆಯಲು ಮೈಸೂರಿಗೆ ತೆರಳಬೇಕು. ಹೀಗಾಗಿ ಜನಸಾಮಾನ್ಯರು ಇನ್ನು ತುಂಬಾ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ನಮ್ಮಲ್ಲಿ ಮುಖ್ಯವಾಗಿ ಕಂದಾಯ ಮತ್ತು ಅರಣ್ಯ ಭೂಮಿಯ ಬಗ್ಗೆ ಭೌತಿಕ ಸರ್ವೆ ಮಾತ್ರವಲ್ಲ ಪರಿಶೋಧನೆ ಕಾರ್ಯ ಕೂಡ ಮಾಡಬೇಕಾಗಿದೆ. ಆಗ ಎಲ್ಲ ಚಿತ್ರಣ ಸಿಗುತ್ತದೆ. ಇದು ಕಸ್ತೂರಿ ರಂಗನ್ ವರದಿ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾಡುಪ್ರಾಣಿಗಳ ಹಾವಳಿ ಕುರಿತು ಕಾರ್ಕಳ ಕೃಷಿಕ ಸಮಾಜದ ಅಧ್ಯಕ್ಷ ನವೀನ್‌ಚಂದ್ರ ಜೈನ್ ಮಾತನಾಡಿ, ನಮ್ಮಲ್ಲಿ ಹಂದಿ, ಜಿಂಕೆ, ನವಿಲು, ಕಾಡು ಕೋಣ, ಮಂಗಗಳಿಂದ ಸಾಕಷ್ಟು ಕೃಷಿ ನಾಶವಾಗುತ್ತಿದೆ. ಇದರ ಪರಿಣಾಮ ಹೆಚ್ಚಿನವರು ಇಳುವರಿ ಮಾಡುವುದನ್ನೇ ಬಿಟ್ಟಿದ್ದಾರೆ. ಈ ಪ್ರಾಣಿಗಳನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆಗೆ ಸಾಧ್ಯವಾಗದಿದ್ದರೆ ಬೆಳೆ ಪರಿಹಾರ ನೀಡುವ ಕಾರ್ಯ ಮಾಡಬೇಕು. ಕೃಷಿಭೂಮಿಗೆ ಸೋಲಾರ್ ಬೇಲಿ ಅಳವಡಿಸಲು ಸಬ್ಸಿಡಿ ನೀಡಬೇಕು. ಕೃಷಿಕರಿಗೆ ನೀಡುವ ಕೋವಿಯ ಪರವಾನಿಗೆಯನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.
ಕುಮ್ಕಿ ಮತ್ತು ಗೇರು ಲೀಸ್ ಭೂಮಿ ಕುರಿತು ವಕೀಲ ಟಿ.ಬಿ.ಶೆಟ್ಟಿ ಕುಂದಾಪುರ ವಿಚಾರ ಮಂಡಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣ ಹೆಗಡೆ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ, ಉಡುಪಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಕೃಷಿಕ ಸಮಾಜ ಬೆಂಗಳೂರು ರಾಜ್ಯ ನಿರ್ದೇಶಕ ಪ್ರದೀಪ್ ಹೆಬ್ಬಾರ್ ನಂಚಾರ್, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೇಲ್, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ನಾಯ್ಕ್ ಉಪಸ್ಥಿತರಿದ್ದರು. ಬ್ರಹ್ಮಾವರ ಕೃಷಿಕ ಸಮಾಜ ಅಧ್ಯಕ್ಷ ವೈಕುಂಠ ಹೇರಳೆ ಕಾರ‌್ಯಕ್ರಮ ನಿರೂಪಿಸಿದರು.






