ಕಾರ್ಕಳ ಥೀಮ್ ಪಾರ್ಕ್ ಅಭಿವೃದ್ಧಿಗೆ ಸರಕಾರ ನಿರ್ಧಾರ: ಶುಭದ ರಾವ್

ಉಡುಪಿ, ನ.5: ಕಾರ್ಕಳದಲ್ಲಿ ವಿವಾದದ ಕೇಂದ್ರಬಿಂದುವಾಗಿರುವ ಪರಶುರಾಮ ಪ್ರತಿಮೆಯ ಪುನರ್ನಿಮಾಣದ ಸಿದ್ಧತೆಯಾಗಿ ರಾಜ್ಯ ಸರಕಾರ ಅಲ್ಲಿನ ಥೀಮ್ ಪಾರ್ಕ್ ಅಭಿವೃದ್ಧಿ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿಕಾಸ ಸೌಧದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ನೇತೃತ್ವದಲ್ಲಿ ನಡೆದ ಜಿಲ್ಲೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಈ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ ಎಂದರು.
ಸಭೆಯಲ್ಲಿ ಥೀಮ್ ಪಾರ್ಕ್ ಅಭಿವೃದ್ದಿಗೆ ಹಲವು ಪ್ರಮುಖ ನಿರ್ಣಯ ಗಳನ್ನು ಕೈಗೊಂಡು ಅನುಷ್ಠಾನಕ್ಕೆ ನಿರ್ಧರಿಸ ಲಾಗಿದೆ ಎಂದ ಅವರು, ರಾಜ್ಯ ಸರಕಾರದ ಈ ನಿರ್ಧಾರವನ್ನು ತಾವು ಸ್ವಾಗತಿಸುವುದಾಗಿ ತಿಳಿಸಿದರು.
2023ರ ವಿಧಾನಸಭಾ ಚುನಾವಣಾ ಮುನ್ನ ಕಾರ್ಕಳದ ಬೈಲೂರಿನ ಉಮ್ಮಿಕಲ್ ಬೆಟ್ಟದ ಮೇಲೆ ನಿರ್ಮಾಣಗೊಂಡ ಪರಶುರಾಮನ ಕಂಚಿನ ನಕಲಿ ಪ್ರತಿಮೆಗೆ ಮುಕ್ತಿ ಸಿಗುವ ಕಾಲ ಬಂದಿದೆ. ಕಂಚಿನ ಪ್ರತಿಮೆ ನಿರ್ಮಾಣ ಮಾಡಿದ್ದೇವೆ ಎಂದು ಸುಳ್ಳು ಹೇಳಿ ರಾಜ್ಯದ ಮುಖ್ಯ ಮಂತ್ರಿಯನ್ನು ಕರೆಸಿ ಉದ್ಘಾಟಿಸಿ ಧರ್ಮದ್ರೋಹದ ಕೆಲಸ ಮಾಡಿ ನಂತರ ಅದನ್ನು ಸಮರ್ಥಿಸಲು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಶಾಸಕ ಸುನೀಲ್ ಕುಮಾರ್ ನಾಟಕಕ್ಕೆ ಅಂಕದ ಪರದೆ ಬೀಳುವ ಕಾಲ ಬಂದಿದೆ ಎಂದು ಅವರು ಹೇಳಿದರು.
ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಹೈಕೋರ್ಟಿಗೆ ಸಲ್ಲಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪುರಸ್ಕರಿಸಿ ಕೋರ್ಟ್ ನೀಡಿದ ಮಾರ್ಗದರ್ಶನ ದಂತೆ ಸರಕಾರ ಪ್ರಮುಖ ನಿರ್ಧಾರವನ್ನು ಕೈಗೊಂಡಿ ರುವುದಾಗಿ ಹೇಳಿದ ಶುಭದ ರಾವ್, ಪ್ರತಿಮೆ ಪುನರ್ ನಿರ್ಮಾಣದ ಕುರಿತಂತೆ ತಾಂತ್ರಿಕ ಪರಿಣಿತರ ಸಲಹೆ ಪಡೆಯುವುದು, ಪಾರ್ಕಿನ ಗೋಮಾಳ ಜಮೀನನ್ನು ಥೀಮ್ ಪಾರ್ಕ್ ಹೆಸರಿಗೆ ವರ್ಗಾಹಿಸಲು ಅಗತ್ಯ ಕ್ರಮವಹಿಸುವುದು, ಪಾರದರ್ಶಕವಾಗಿ ಕಾಮಗಾರಿ ನಡೆಸಲು ಹೊಸ ಟೆಂಡರ್ ಕರೆಯುವುದು ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಿರ್ಧರಿಸಿರುವುದು ಉತ್ತಮ ಬೆಳವಣಿಗೆ ಎಂದವರು ವಿವರಿಸಿದರು.
ರಾಜ್ಯ ಸರಕಾರ ಹೊಸದಾದ ಪರಶುರಾಮ ಪ್ರತಿಮೆ ನಿರ್ಮಾಣ ಹಾಗೂ ಥೀಮ್ ಪಾರ್ಕ್ ಅಭಿವೃದ್ಧಿಗೆ ಮುಂದಾಗು ತ್ತಿರುವಂತೆ ಕಾರ್ಕಳ ಶಾಸಕರು ಹೊಸ ನಾಟಕ ಪ್ರಾರಂಭಿಸಿದ್ದು, ಥೀಮ್ ಪಾರ್ಕ್ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಬೆಂಗಳೂರಿನಿಂದ ಕಾರ್ಕಳಕ್ಕೆ ವಾಹನ ಜಾಥ ನಡೆಸುವ ಪೋಸ್ಟರ್‌ನ್ನು ತನ್ನ ಆಪ್ತರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರಕಾರದ ನಿರ್ಧಾರದಿಂದ ಕಳೆದ ಮೂರು ವರ್ಷಗಳಿಂದ ನಡೆಯು ತ್ತಿದ್ದ ಹೋರಾಟಕ್ಕೆ ಮತ್ತೊಂದು ಹಂತದ ಜಯ ಸಿಕ್ಕಿದಂತಾಗಿದೆ ಎಂದವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರಾದ ಸುಬಿತ್ ಕುಮಾರ್ ಎನ್.ಆರ್. ಮತ್ತು ಪ್ರತಿಮಾ ರಾಣೆ, ಪುರಸಭೆಯ ಮಾಜಿ ಸದಸ್ಯ ವಿವೇಕಾನಂದ ಶೆಣೈ ಹಾಗೂ ಕೆಎಂಎಫ್‌ನ ನಿರ್ದೇಶಕ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.






