ಕನ್ನರ್ಪಾಡಿ ದೇವಸ್ಥಾನದ ಬಳಿ ಕಸದ ರಾಶಿ: ದುರ್ನಾತದಿಂದ ಭಕ್ತರಿಗೆ ತೊಂದರೆ

ಉಡುಪಿ, ನ.7: ಕಿನ್ನಿಮುಲ್ಕಿ ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರಿ ದೇವಸ್ಥಾನದ ಗೋಪುರದ ಬಲಭಾಗದ ಅಂಬಲಪಾಡಿ ಸರ್ವಿಸ್ ರಸ್ತೆಯ ಬದಿಯಲ್ಲಿ ಕಸದ ರಾಶಿ ಸಂಗ್ರಹಗೊಂಡು ತೀವ್ರ ದುರ್ನಾತ ಹರಡುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಕೊಳೆತ ಕಸದಿಂದ ನೊಣ, ಸೊಳ್ಳೆ ಹಾಗೂ ಕ್ರಿಮಿಕೀಟಗಳ ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ, ಅತಿಸಾರ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ಅಲ್ಲದೆ, ಕಸದ ದುರ್ನಾತ ವಾಯುಮಾ ಲಿನ್ಯಕ್ಕೆ ಕಾರಣವಾಗುವುದರೊಂದಿಗೆ ಮಣ್ಣು ಮತ್ತು ಅಂತರ್ಜಲದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯಿದೆ.
ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಸದ ರಾಶಿಯನ್ನು ತೆರವುಗೊಳಿಸಿ, ಪರಿಸರ ಸ್ವಚ್ಛಗೊಳಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರನ್ನು ಗುರುತಿಸಿ ದಂಡ ವಿಧಿಸುವುದರೊಂದಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ದೇವಸ್ಥಾನದ ಪರಿಸರದ ಪಾವಿತ್ರ್ಯ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾ ಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.




