ದೀಪಾವಳಿ: ಪಟಾಕಿ ಶಬ್ದದ ವಾಯುಮಾಲಿನ್ಯ ನಿಯಂತ್ರಣಕ್ಕೆ ಸೂಚನೆ

ಉಡುಪಿ: ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ದೇಶಾದ್ಯಂತ ಸಾಂಪ್ರದಾಯಿಕ ಸಡಗರಗಳೊಂದಿಗೆ ಆಚರಿಸಲಾ ಗುತಿದ್ದು, ಈ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಿ ದೀಪಾವಳಿ ಹಬ್ಬವನ್ನು ಆಚರಿಸುವ ಕ್ರಮ ಸಾಮಾನ್ಯವಾಗುತ್ತಿದೆ.
ಈ ರೀತಿ ಪಟಾಕಿಗಳನ್ನು ಸಿಡಿಸುವುದರಿಂದ ವಾಯು ಮಾಲಿನ್ಯವು ಹೆಚ್ಚಾಗುವುದಲ್ಲದೇ ಹೆಚ್ಚಾದ ಶಬ್ದ ಮಾಲಿನ್ಯ ದಿಂದ ಮನುಷ್ಯನ ಮತ್ತು ಜೀವ ಸಂಕಲನದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿರುವುದು ದೇಶದಾದ್ಯಂತ ನಡೆಸಿದ ಅಧ್ಯಯನದಿಂದ ಸಾಬಿತಾಗಿದೆ. ಆದ್ದರಿಂದ 2018ರ ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಸಿಎಸ್ಐಆರ್- ನೀರಿ ಶಿಫಾರಸ್ಸು ಮಾಡಿದ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸುವಂತೆ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.
ಹೀಗಾಗಿ ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಹಸಿರು ಪಟಾಕಿ ಗಳನ್ನು ಮಾತ್ರ ಉಪಯೋಗಿಸಬೇಕು. ಹಸಿರು ಪಟಾಕಿಗಳನ್ನು ಹೊರತುಪಡಿಸಿ ಇತರ ಪಟಾಕಿಗಳ ಬಳಕೆಗೆ ಸಂಪೂರ್ಣ ನಿಷೇಧವಿದೆ. ಮತ್ತು ಹಬ್ಬದ ಅವಧಿ ಯಲ್ಲಿ ರಾತ್ರಿ 8ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿ (ಕಡಿಮೆ ಶಬ್ದ ಮಾಡುವ) ಮತ್ತು ಸಿಡಿಮದ್ದುಗಳನ್ನು ಸಿಡಿಸುವುದಕ್ಕೆ ಒಪ್ಪಿಗೆ ನೀಡಲಾಗಿದೆ.
ಆಚರಣೆಯ ಸಮಯದಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗು ವೃದ್ಧರಿಗೆ ತೊಂದರೆಯಾಗದಂತೆ ಪಟಾಕಿಗಳನ್ನು ಬಳಸಬೇಕು ಹಾಗೂ ಉಳಿದ ಸಮಯದಲ್ಲಿ ಪಟಾಕಿ/ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ. ದೀಪಾವಳಿ ಹಬ್ಬದ ಶುಭ ಸಮಯದಲ್ಲಿ ಮಾಲಿನ್ಯ ನಿಯಂತ್ರಣದ ಕುರಿತ ಸಂದೇಶಗಳನ್ನು ಸಾರ್ವಜನಿಕರು ಪಾಲಿಸುವಂತೆ ಉಡುಪಿ ಕ.ರಾ.ಮಾ.ನಿ.ಮಂ. ಪರಿಸರ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.






