ಸಾರ್ವಜನಿಕ ಹಿತಾಸಕ್ತಿಯ ಅಹವಾಲುಗಳನ್ನು ಮೊದಲು ಬಗೆಹರಿಸಿ: ಪ್ರಜಾಸೇವಾ ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್

ಉಡುಪಿ, ನ.7: ಆಡಳಿತದಲ್ಲಿ ಸುಧಾರಣೆ ತರುವುದರೊಂದಿಗೆ ಜನರ ಅಹವಾಲುಗಳನ್ನು ಸ್ಥಳದಲ್ಲಿಯೇ ನಿವಾರಿ ಸಲು, ಸರಕಾರವು ನೂತನ ಪ್ರಜಾಸೇವಾ ಆಂದೋಲನಸಭೆಗಳನ್ನು ಆಯೋಜಿಸುತಿದ್ದು, ಜನಸಾಮಾನ್ಯರು ಎದುರಿಸುತ್ತಿರುವ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆ ಮೇಲೆ ಬಗೆಹರಿಸುವಂತೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ, ಪ್ರಜಾಸೇವಾ ಇಲಾಖೆ ತಾಲೂಕು ಆಡಳಿತ ಕಾರ್ಕಳ ಇವರ ವತಿಯಿಂದ ಅಜೆಕಾರು ಹೋಬಳಿಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸರಕಾರವೇ ಜನರ ಬಳಿ ಬರಬೇಕು. ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ನೀಡಬೇಕು ಎಂಬ ಆಶಯದಂತೆ ಪ್ರಜಾಸೇವಾ ಆಂದೋಲನ ಸಭೆಗಳನ್ನು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತೀ ಶನಿವಾರ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದ ಅವರು, ಜನರ ಸಮಸ್ಯೆಗಳನ್ನು ಅರಿಯಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.
ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಬರುವ ಅರ್ಜಿಗಳನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು, ಆಗ ಮಾತ್ರ ಪ್ರಜಾಸೇವೆ ಕಾರ್ಯಕ್ರಮ ಯಶಸ್ಸು ಕಾಣಲಿದೆ. ಯಾವುದೇ ಅರ್ಜಿ ಯನ್ನು ಇಲಾಖೆಯಿಂದ ಇಲಾಖೆಗೆ ವರ್ಗಾಯಿಸುವ ಕೆಲಸವನ್ನು ಅಧಿಕಾರಿ ಗಳು ಮಾಡಬಾರದು. ಜನರ ಅಹವಾಲಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಿ ಪರಿಹರಿಸಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಸ್ತಾವಿಕವಾಗಿ ಮಾತನಾಡಿ, ಸರಕಾರದ ಮಹತ್ವಾಕಾಂಕ್ಷಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಪ್ರತೀ ಶನಿವಾರ ಆಯೋಜಿಸುವ ಮೂಲಕ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಸಭೆಗಳಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು ಐಪಿಜಿಆರ್‌ಎಸ್ ಪೋರ್ಟಲ್ ನಲ್ಲಿ ಅಪ್‌ಲೋಡ್ ಮಾಡಲಾ ಗುತ್ತದೆ. ಅಲ್ಲದೇ ಪ್ರತೀ ಬುಧವಾದ ಬೆಳಗ್ಗೆ 9-11 ರವರೆಗೆ ತಹಶೀಲ್ದಾರ್, ಬೆ. 11ರಿಂದ ಮಧ್ಯಾಹ್ನ 1:00ರವರೆಗೆ ಸಹಾಯಕ ಕಮಿಷನರ್ ಹಾಗೂ 3ರಿಂದ 5ರವರೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರಿಂದ ಬರುವ ಅಹವಾಲುಗಳನ್ನು ಸರಿಯಾದ ರೀತಿಯಲ್ಲಿ ವರ್ಗೀಕರಣ ಮಾಡಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ನೀಡುವ ಉತ್ತರವನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದು, ಬಂದ 2400ಕ್ಕೂ ಅಧಿಕ ಅರ್ಜಿಗಳಲ್ಲಿ 1700 ಅರ್ಜಿಗಳನ್ನು ವಾಪಾಸು ಅಧಿಕಾರಿಗಳಿಗೆ ನೀಡಲಾಗಿದೆ ಎಂದ ಅವರು, ಸೇವೆಯೇ ನಮ್ಮ ಧರ್ಮ ಎಂಬ ಮನೋಭಾವದಿಂದ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 23 ಅರ್ಜಿಗಳು ಸ್ವೀಕೃತವಾಗಿದವು.
ಸಭೆಯಲ್ಲಿ ಶ್ರೀನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಎಎಸ್‌ಪಿ ಸುಧಾಕರ್ ನಾಯಕ್, ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಇಶಿತಾ ಗುಪ್ತ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಕುಂದಾಪುರ ವಿಭಾಗದ ಎಸಿಎಫ್ ಶಶಿಕಾಂತ್ ಭುದೆ, ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಡಿಓ ಪ್ರತಾಪ್ ಶೆಟ್ಟಿ ಸ್ವಾಗತಿಸಿ, ಉಪ ತಹಶೀಲ್ದಾರ್ ನಳಿನಿ ಕಾರ್ಯಕ್ರಮ ನಿರೂಪಿಸಿ, ಇ.ಒ ಪ್ರಶಾಂತ್ ಸಿ ರಾವ್ ವಂದಿಸಿದರು.






