ಉಡುಪಿ ಶ್ರೀಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ

ಉಡುಪಿ, ನ.9: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಶೀರೂರು ಮಠ ದಲ್ಲಿ ಇಂದು ಬಲೀಂದ್ರ ಪೂಜೆ ಕನಕ ಗೋಪುರದ ಎದುರಿನಲ್ಲಿ ಪರ್ಯಾಯ ಪೀಠಾಧೀಶ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಠದ ಪುರೋಹಿತ ಸುದರ್ಶನ ಆಚಾರ್ಯ ನೇತೃತ್ವದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ಶ್ರೀೀಕೃಷ್ಣಮಠ ಪರ್ಯಾಯ ಶೀರೂರು ಮಠದಲ್ಲಿ ದೀಪಾವಳಿ ಸಂದರ್ಭ ದಲ್ಲಿ ಗೋಪೂಜೆ ವೈಭವದಿಂದ ನಡೆಯಿತು. ಪರ್ಯಾಯ ಪೀಠಾಧೀಶ ಶ್ರೀವೇದವರ್ಧನತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಗೋವುಗಳನ್ನು ಅಲಂಕರಿಸಿ ವಿಶೇಷ ನೈವೇದ್ಯ ಸಮರ್ಪಿಸಿ ಪೂಜಿಸಿ ಮೆರವಣಿಗೆ ನಡೆಸಲಾಯಿತು.
ಸಾಮೂಹಿಕ ಗೋಪೂಜೆ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಸಹಯೋಗದೊಂದಿಗೆ ಕೋಡಿ ಕನ್ಯಾಣ ಸದಾಶಿವ ಐತಾಳ್‌ರ ಮನೆಯಂಗಳದಿ ಐದನೇ ವರ್ಷದ ಗೋ ಆರಾಧನೆ ಗೋ ಪೂಜಾ ಕಾರ್ಯಕ್ರಮ ವನ್ನು ಸೋಮವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್ ಉದ್ಘಾಟಿಸಿದರು. ಈ ವೇಳೆ ಹಿರಿಯ ಹೈನುಗಾರ ಸದಾಶಿವ ಐತಾಳ ದಂಪತಿ ಗೋ ಪೂಜೆಯನ್ನು ನೆರವೆರಿಸಿದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಸಿಇಓ ಶರತ್ ಕುರ್ಮಾ ಶೆಟ್ಟಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಪ್ರಬಂಧಕ ಕೋಡಿ ಚಂದ್ರಶೇಖರ್ ನಾವಡ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಸಲಹೆಗಾರರಾದ ಪೂರ್ಣಿಮಾ ಅಧಿಕಾರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿದರು.






