ವೈಶ್ಯಾವಾಟಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಬಂಧನ

ಮಣಿಪಾಲ, ನ.11: ವೈಶ್ಯಾವಾಟಿಕೆ ಹಾಗೂ ಮಾನವ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಮಹಿಳೆ ಸಹಿತ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಲದ ಎಸ್ತಾರ್ ಶಾಹ ಯಾನೆ ಕಾಜಲ್(40) ಹಾಗೂ ಆಕೆಯ ಪತಿ ಸಂಜಯ(49) ಬಂಧಿತ ಆರೋಪಿಗಳು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಎಸ್ಸೈ ತಿಮ್ಮೇಶ್ ಬಿ.ಎನ್. ಸಹಾಯಕ ತನಿಖಾಧಿಕಾರಿಯಾಗಿ ನೇಮಿಸಿದ್ದು ಅದರಂತೆ ತಿಮ್ಮೇಶ್, ಸಿಬ್ಬಂದಿ ಸುರೇಶ ಶೆಟ್ಟಿ, ಚೇತನ್, ರವಿರಾಜ್, ಜ್ಯೋತಿ ನಾಯಕ್ ಹಾಗೂ ಸುಮಲತ ಅವರೊಂದಿಗೆ ಪಶ್ಚಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯ ನೇತಾಜಿ ನಗರ ಎಂಬಲ್ಲಿ ತೆರಳಿ ನ.3ರಂದು ಆರೋಪಿಗಳನ್ನು ಬಂಧಿಸಿದರು.
ಆರೋಪಿಗಳನ್ನು ನ.7ರಂದು ಉಡುಪಿ ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ.11ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
Next Story




