ಬಲಿಯಂದ್ರನ ತುಳು ರಾಜ್ಯ ಮರಳಿ ಬರಲಿ: ದಯಾನಂದ ಕತ್ತಲ್‌ಸಾರ್

ಕಾಪು, ನ.11: ತುಳುವ ಮಹಾಸಭೆಯ ಕಾಪು ವಲಯ ಸಮಿತಿಯ ನೇತೃತ್ವದಲ್ಲಿ ಹಾಗೂ ಅಡ್ವೆ ನಂದಿಕೂರು ಗ್ರಾಮದ ಗ್ರಾಮಸ್ಥರ ಸಹಯೋಗದಲ್ಲಿ ಅಡ್ವೆ ನಂದಿಕೂರಿನ ಐತಿಹಾಸಿಕ ನಿನ್ನಿಕಲ್ಲು ಪಾದೆಯಲ್ಲಿ 1,008 ದೀಪಗಳನ್ನು ಬೆಳಗಿಸುವ ಮೂಲಕ ಬಲಿಪರ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಹಾಗೂ ಹಿರಿಯ ಜಾನಪದ ಕಲಾವಿದ, ದೈವ ನರ್ತಕ ಬಾಲಕೃಷ್ಣ ಕತ್ತಲ್‌ಸಾರ್ ಸಾಂಪ್ರದಾಯಿಕ ಶೈಲಿಯಲ್ಲಿ ‘ಬಲಿಂದ್ರ ಲೆಪ್ಪು’ ನೀಡುವ ಮೂಲಕ ಕಾರ್ಯಕ್ರಮಕ್ಕೆ ನವಚೈತನ್ಯ ತುಂಬಿದರು.
ಬಳಿಕ ಮಾತನಾಡಿದ ದಯಾನಂದ ಜಿ.ಕತ್ತಲ್‌ಸಾರ್, ಬಲಿಚಕ್ರವರ್ತಿಯ ಕಾಲವು ಕಪಟ, ವಂಚನೆ ಹಾಗೂ ಜಾತಿ ಭೇದಗಳಿಲ್ಲದ ಸತ್ಯದ ಯುಗವಾಗಿತ್ತು. ನಿನ್ನಿ’ ಎಂದರೆ ಸತ್ಯ ಎಂಬ ಅರ್ಥವಿದೆ. ನಿನ್ನಿಕಲ್ಲು ಪಾದೆಯ ಈ ಸತ್ಯದ ನೆಲದಲ್ಲಿ ಅರಳಿದ ಬೆಳಕು ಬಲಿಚಕ್ರವರ್ತಿಯ ಹೊಸ ತುಳು ರಾಜ್ಯದ ಪುನರುತ್ಥಾನಕ್ಕೆ ಪ್ರೇರಣೆಯಾಗಲಿ. ಬಲಿಯಂದ್ರನ ತುಳು ರಾಜ್ಯ ಮರಳಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತುಳುವರ್ಲ್ಡ್ ಫೌಂಡೇಶನ್‌ನ ನಿರ್ದೇಶಕ ರಾಜೇಶ್ ಆಳ್ವ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ಕಾರ್ಯದರ್ಶಿ ಮನೋಹರ್ ರೈ, ತುಳುವ ಮಹಾಸಭೆಯ ಪ್ರಧಾನ ಸಂಚಾಲಕ ಅರವಿಂದ ಬೆಳ್ಚಡ, ನಿನ್ನಿಕಲ್ಲು ಪಾದೆ ಪುನಶ್ಚೇತನ ಸಮಿತಿಯ ಪ್ರಧಾನ ಸಂಚಾಲಕ ವಿಜಿತ್ ಶೆಟ್ಟಿ ಕೊರಂಗ್ರಪಾಡಿ ದೊಡ್ಡಮನೆ, ಕಾಪು ತುಳುವ ಮಹಾಸಭೆಯ ಅಧ್ಯಕ್ಷ ರಘುರಾಮ ಶೆಟ್ಟಿ ಕೊಪ್ಪಲಂಗಡಿ, ಪ್ರಧಾನ ಸಂಚಾಲಕ ವಿಕ್ಕಿ ಪೂಜಾರಿ ಮಡುಂಬು, ಪುನೀತ್(ತುಳುನಾಡು ವಾರ್ತೆ), ಕಾಪು ತುಳುವ ಮಹಾ ಸಭೆಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ವೇತಾ ಎಲ್.ಶೆಟ್ಟಿ, ಜೊತೆ ಕಾರ್ಯದರ್ಶಿ ದೀಕ್ಷಾ ಶೆಟ್ಟಿ, ಸದಸ್ಯರಾದ ಹೇಮಲತಾ ಮತ್ತು ಸುಲೋಚನಾ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ಪಾನಕ, ಪಂಚಕಜ್ಜಾಯ ಹಾಗೂ ಉಪಹಾರ ವಿತರಿಸಲಾಯಿತು.






