ಒನಕೆ ಓಬವ್ವ ನಾರಿ ಶಕ್ತಿಯ ಪ್ರತೀಕ: ದಿನಕರ ಹೇರೂರು

ಉಡುಪಿ, ನ.11: ಧೈರ್ಯ, ಸಾಹಸ ಹಾಗೂ ಕೆಚ್ಚೆದೆಯ ಹೋರಾಟಕ್ಕೆ ಹೆಸರಾದ ಒನಕೆ ಓಬವ್ವ, ಶತ್ರುಗಳ ದಾಳಿಯಿಂದ ಚಿತ್ರದುರ್ಗದ ಕೋಟೆ ಯನ್ನು ರಕ್ಷಿಸುವ ಮೂಲಕ ನಾರೀ ಶಕ್ತಿಯ ಪ್ರತೀಕವಾಗಿ ಹಾಗೂ ಮಹಿಳೆ ಯರಿಗೆ ಪ್ರೇರಣೆಯಾಗಿ ಇಂದಿಗೂ ಚಿರಸ್ಥಾಯಿಯಾಗಿದ್ದಾರೆ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮೃದ್ಧವಾದ ಕನ್ನಡನಾಡನ್ನು ಕಟ್ಟುವಲ್ಲಿ ಅನೇಕ ಮಹನೀಯರು ಮತ್ತು ಮಹಿಳೆಯರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇಂತಹ ಮಹಿಳೆಯರಲ್ಲಿ ಓಬವ್ವ ಕೂಡ ಒಬ್ಬರು. ಅವರ ಸಾಹಸಗಾಥೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಹಾಗೂ ಅವರ ಮಾರ್ಗದರ್ಶನದಲ್ಲಿ ನಡೆಯಲು ಸರಕಾರದ ವತಿಯಿಂದ ಇಂತಹ ಮಹಾನ್ ಚೇತನರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಹೈದರಾಲಿ ಸೈನ್ಯ, ಚಿತ್ರದುರ್ಗದ ಕೋಟೆಯ ಮೇಲೆ ದಾಳಿ ನಡೆಸಿ, ರಹಸ್ಯ ಕಿಂಡಿಯ ಮೂಲಕ ಕೋಟೆಯೊಳಗೆ ನುಸುಳಲು ಸೈನಿಕರು ಪ್ರಯತ್ನಿಸುತ್ತಿ ರುವುದನ್ನು ಕಂಡ ಓಬವ್ವ ತನ್ನ ನಾಡನ್ನು ಶತ್ರುಗಳಿಂದ ರಕ್ಷಿಸಲು, ಒನಕೆ ಯನ್ನು ತನ್ನ ಆಯುಧವನ್ನಾಗಿ ಮಾಡಿಕೊಂಡು ಶತ್ರು ಸೈನಿಕರನ್ನು ಒಬ್ಬೊಬ್ಬರಾಗಿ ಕೊಂದು ಕೋಟೆಯನ್ನು ರಕ್ಷಿಸಿ ದಳು. ಓಬವ್ವರಂತೆ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕ ಮಂದಿ ಮಹಿಳೆ ಯರು ತಮ್ಮದೇ ರೀತಿಯಲ್ಲಿ ದೇಶ ಹಾಗೂ ನಾಡು ರಕ್ಷಣೆಗೆ ಶ್ರಮಿಸಿದ್ದಾರೆ. ಅವರ ಈ ತ್ಯಾಗ, ಸಾಹಸ ಮತ್ತು ಕೆಚ್ಚೆದೆಯ ಬದುಕು ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂದು ದಿನಕರ ಹೇರೂರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಯ ಜೊತೆಗೆ ದೇಶ ರಕ್ಷಣೆಯನ್ನು ಸಹ ಮಾಡಬಹುದು ಎನ್ನುವುದು ಓಬವ್ವ ಸೇರಿದಂತೆ ಅನೇಕ ವೀರ ಮಹಿಳೆಯರ ಯಶೋಗಾಥೆಯಿಂದ ತಿಳಿಯಬಹುದು. ಅವರ ಸಮರ್ಪಣಾ ಭಾವ ಪ್ರತಿಯೊಬ್ಬರಿಗೂ ಮಾದರಿಯಾಗುವಂತದ್ದು. ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಇಂತಹವರ ಬದುಕನ್ನು ಉದಾಹರಣೆಯಾಗಿ ನೀಡಬೇಕು ಎಂದರು.
ಓಬವ್ವರ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಕನ್ನಡ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ಮಾತ ನಾಡಿ, 18ನೇ ಶತಮಾನದಲ್ಲಿ ಚಿತ್ರದುರ್ಗ ಎಂಬ ಉಕ್ಕಿನ ಕೋಟೆಯನ್ನು ಆಳುತ್ತಿದ್ದ ಪಾಳೆಗಾರ ಮದಕರಿ ನಾಯಕ. ಆ ಅರಮನೆಯ ಕಾವಲುಗಾರನ ಪತ್ನಿ ಓಬವ್ವ. ಮನೆವಾರ್ತೆ ಕೆಲಸ ಮಾಡಿ ಕೊಂಡಿದ್ದ ಓಬವ್ವ ಯುದ್ಧಕಲೆಯ ಆಳ, ಅಗಲದ ಅರಿವಿಲ್ಲದೆ ಇದ್ದರೂ, ತನ್ನ ನಾಡಿನ ರಕ್ಷಣೆ ಮಾಡಬೇಕೆಂಬ ಕಿಚ್ಚು ಅವರಲ್ಲಿತ್ತು. ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಊಟ ಮಾಡುತ್ತಿರುವ ಗಂಡನನ್ನು ಎಬ್ಬಿಸದೇ, ಶತ್ರು ಸೈನ್ಯವನ್ನು ಕೇವಲ ಒನಕೆಯಿಂದ ಸದೆ ಬಡಿದು, ಕೆಚ್ಚೆದೆಯಿಂದ ಹೋರಾಡಿ ವೀರ ಮರಣವ ನ್ನಪ್ಪಿದ ಧೀರ ಮಹಿಳೆ ಓಬವ್ವ. ಆಕೆಯ ಅಪ್ರತಿಮ ಸಾಹಸ, ಧೈರ್ಯ, ಸಮಯಪ್ರಜ್ಞೆ ಸ್ತ್ರೀಶಕ್ತಿಯ ಪ್ರತೀಕವಾಗಿದ್ದು, ಅವರ ತೇಜಸ್ಸು ಪ್ರತಿಯೊಬ್ಬ ರಲ್ಲೂ ಉದ್ದೀಪನಗೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಉಪತಹಶೀಲ್ದಾರ್ ನವನೀತ್, ಜಿಲ್ಲಾಡಳಿತದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಇಲಾಖೆಯ ವರ್ಷಾ ಬಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






