ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸಿ: ಉಡುಪಿ ಕಥೊಲಿಕ್ ಸಭಾದಿಂದ ಸರಕಾರಕ್ಕೆ ಮನವಿ ಸಲ್ಲಿಕೆ

ಉಡುಪಿ, ನ.12: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣಾ ಕಾಯ್ದೆ-2022 (ಮತಾಂತರ ನಿಷೇಧ ಕಾಯ್ದೆ) ರದ್ದುಗೊಳಿಸುವುದರೊಂದಿಗೆ, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದುರ್ಬಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದ್ವೇಷಪೂರಿತ ಭಾಷಣಗಳು, ಕೋಮುವಾದಿ ಪ್ರಚೋದನೆ ಮತ್ತು ಹಿಂಸಾ ಚಾರದ ವಿರುದ್ಧ ಸಮಗ್ರ ರಕ್ಷಣಾ ನೀತಿಯನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಉಡುಪಿ ಕ್ರೈಸ್ತ ಧರ್ಮಪ್ರಾಂತ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣಾ ಕಾಯ್ದೆ-2022 ಧಾರ್ಮಿಕ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳು, ಧಾರ್ಮಿಕ ಗುರುತು ಮತ್ತು ನಂಬಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರು ತ್ತಿದೆ. ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುವ ಅಪಾಯ ಹೊಂದಿದ್ದು, ಸಂವಿಧಾನವು ಖಾತರಿಪಡಿಸಿರುವ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ. ವಿಶೇಷ ವಾಗಿ ಕ್ರೈಸ್ತ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಕಾಯ್ದೆಯ ಜಾರಿ ಮತ್ತು ಪರಿಣಾಮಗಳು ತಮ್ಮ ಧಾರ್ಮಿಕ ಗುರುತು, ನಂಬಿಕೆ ಹಾಗೂ ಆಚರಣೆಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಪಡಿಸುವ ಹಕ್ಕಿನ ಮೇಲೆ ನಿರ್ಬಂಧ ಹೇರುವಂತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಭಾರತೀಯ ಸಂವಿಧಾನದ ವಿಧಿ 25ರ ಅಡಿಯಲ್ಲಿ ಪ್ರತಿಯೊಬ್ಬರಿಗೂ ಧರ್ಮವನ್ನು ನಂಬುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿದೆ. ಆದರೆ, ಪ್ರಸ್ತುತ ಕಾಯ್ದೆಯ ವ್ಯಾಪಕ ನಿರ್ಬಂಧಗಳು ಮತ್ತು ನಿಯಮಾವಳಿ ಗಳು ಶಾಸಕಾಂಗದ ಅಧಿಕಾರದ ಮಿತಿಯನ್ನು ಮೀರಿರುವ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳ ವಿಚಾರದಲ್ಲಿ ಕ್ರಿಮಿನಲ್ ಮೊಕದ್ದಮೆಯ ಭಯದ ವಾತಾವರಣ ನಿರ್ಮಾಣ ವಾಗುವ ಅಪಾಯವಿದೆ. ವ್ಯಕ್ತಿಗಳು ಮತ್ತು ಸಮುದಾಯಗಳು ತಮ್ಮ ಧಾರ್ಮಿಕ ನಂಬಿಕೆಗಳ ನ್ಯಾಯಸಮ್ಮತತೆಯನ್ನು ನಿರಂತರವಾಗಿ ಸಮರ್ಥಿಸಿ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ ಎಂದು ಮನವಿ ವಿವರಿಸಿದೆ.
ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವ ಘನತೆಯ ಸಂವಿಧಾನಿಕ ಆಶಯಗಳನ್ನು ಎತ್ತಿಹಿಡಿಯಲು ಈ ಕಾಯ್ದೆಯನ್ನು ರದ್ದುಗೊಳಿಸುವ ಮೂಲಕ ಕರ್ನಾಟಕ ಸರ್ಕಾರ ಮಾದರಿ ನಾಯಕತ್ವ ಪ್ರದರ್ಶಿಸಬೇಕು. ಅಲ್ಲದೆ, ಈ ನಿಟ್ಟಿನಲ್ಲಿ ಇತರ ರಾಜ್ಯಗಳಿಗೂ ಮಾದರಿ ಯಾಗಬೇಕು ಎಂದು ಹೇಳಿದೆ.
ಅಲ್ಪಸಂಖ್ಯಾತ ಸಮುದಾಯಗಳು ನಿರಂತರವಾಗಿ ದ್ವೇಷ, ಕಿರುಕುಳ ಮತ್ತು ಹಿಂಸಾಚಾರದ ಬೆದರಿಕೆ ಎದುರಿಸುತ್ತಿ ರುವ ಸಂದರ್ಭದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಘನತೆಯಿಂದ ಬದುಕುವ ಹಕ್ಕನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಿಲ್ಲ. ತಾರತಮ್ಯ, ದ್ವೇಷ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಭಾಷಣಗಳು ಶಾಂತಿಯುತ ಸಹಬಾ ಳ್ವೆಗೆ ಧಕ್ಕೆ ತರುವುದರ ಜತೆಗೆ ಸಮಾಜದಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸುತ್ತವೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ದ್ವೇಷಪೂರಿತ ಭಾಷಣಗಳು ಮತ್ತು ಅಪರಾಧಗಳನ್ನು ತಡೆಯಲು ಕಾನೂನು ನಿಬಂಧನೆಗಳಿದ್ದರೂ, ಅವುಗಳ ಪರಿಣಾಮಕಾರಿ ಅನುಷ್ಠಾನದ ಅಗತ್ಯವಿದೆ. ಸಮಯೋಚಿತ ತನಿಖೆ, ವಿಚಾರಣೆ ಮತ್ತು ತಪ್ಪಿತಸ್ಥರ ಹೊಣೆಗಾರಿಕೆ ಯನ್ನು ಖಚಿತಪಡಿಸದಿರುವುದು ಇಂತಹ ಕಾನೂನುಬಾಹಿರ ಚಟುವಟಿಕೆಗಳು ಮುಂದುವರಿಯಲು ಕಾರಣವಾಗು ತ್ತಿದೆ. ಹೀಗಾಗಿ ದ್ವೇಷ ಭಾಷಣ ಮತ್ತು ದ್ವೇಷಪೂರಿತ ಅಪರಾಧಗಳನ್ನು ತಡೆಯುವ ಕಾನೂನು ಚೌಕಟ್ಟನ್ನು ಪರಿಶೀಲಿಸಿ ಬಲಪಡಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಲಾಗಿದೆ.
ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹಾ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಕಾರ್ಯದರ್ಶಿ ಜುಲಿಯೆಟ್ ಡಿಸೋಜಾ, ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್, ನಿಯೋಜಿತ ಅಧ್ಯಕ್ಷ ಲೂಯಿಸ್ ಡಿಸೋಜಾ, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಡಾ. ಜೆರಾಲ್ಡ್ ಪಿಂಟೊ, ಸಹಬಾಳ್ವೆ ಸಂಸ್ಥೆಯ ಪ್ರೊ. ಫಣಿರಾಜ್ ಉಪಸ್ಥಿತರಿದ್ದರು.






