ಕೊಂಕಣ ರೈಲು ಮಾರ್ಗದ ಹಳಿಗಳ ದ್ವಿಪಥ ನನ್ನ ಆದ್ಯತೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಉಡುಪಿ, ನ.13: ಮುಂಬಯಿಯನ್ನು ಮಂಗಳೂರಿಗೆ ಸಂಪರ್ಕಿಸುವ ಕೊಂಕಣ ರೈಲು ಮಾರ್ಗದ ಹಳಿಗಳ ದ್ವಿಪಥ ನನ್ನ ಪ್ರಮುಖ ಆದ್ಯತೆ ಯಾಗಿದ್ದು, ಇದರಲ್ಲಿ 10 ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ಹಾಗೂ ಎರಡು ಸುರಂಗಗಳ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್‌ನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಉಡುಪಿಯ ಅಜ್ಜರಕಾಡಿನಲ್ಲಿ ಇಂದು ಒಂದು ಕಿಲೋವ್ಯಾಟ್ ಸಾಮರ್ಥ್ಯದ ಎಫ್‌ಎಂ ಪ್ರೇಷಕ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಕೊಂಕಣ ರೈಲ್ವೆಯ ಎಲ್ಲಾ ಹಳಿಗಳ ಡಬ್ಲಿಂಗ್ ನನ್ನ ಮಿಷನ್ ಆಗಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲಾಗುವುದು. ಕೊಂಕಣ ಪ್ರದೇಶ ಹಾಗೂ ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಆದ್ಯತೆ ನೀಡಿತಿದ್ದು, ಈ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಅನುಮೋದನೆ ದೊರೆಯುತ್ತಿದೆ ಎಂದು ಅವರು ತಿಳಿಸಿದರು.
ಈ ಭಾಗದ ರೈಲ್ವೇ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದ ಸಚಿವರು, ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿರುವ ಉಡುಪಿಯ ಇಂದ್ರಾಳಿ ನಿಲ್ದಾಣವನ್ನು ಮೇಲ್ದರ್ಜೆಗೇ ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣದಿಂದ ಪ್ರಯಾಣಿಕರಿಗೆ ಹೆಚ್ಚಿನ ಅನು ಕೂಲವಾ ಗಲಿದೆಯೇ ಎಂಬುದರ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ. ಸ್ಥಳೀಯ ವಾಸ್ತುಶಿಲ್ಪಕ್ಕೆ ಆದ್ಯತೆ ನೀಡುವುದರ ಜತೆಗೆ, ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಉಡುಪಿ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಎರಡು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಜಿಲ್ಲೆಯ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿ, ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಬೈಂದೂರು ರೈಲು ನಿಲ್ದಾಣವನ್ನೂ ಅಭಿವೃದ್ಧಿಪಡಿಸಲಾಗುವುದು ಎಂದೂ ಸಚಿವರು ತಿಳಿಸಿದರು.
ಗೋವಾದ ಮಡಗಾಂವ್‌ನಿಂದ ಮಂಗಳೂರು ಮೂಲಕ ಬೆಂಗಳೂರು ಸಂಪರ್ಕ ಕಲ್ಪಿಸುವ ವಂದೇಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಚಾಲನೆ ನೀಡುತಿದ್ದಾರೆ. ಇದರಿಂದ ಕರಾವಳಿ ಭಾಗದ ಜನರಿಗೆ ಬೆಂಗಳೂರಿಗೆ ತೆರಳಲು ಉತ್ತಮ ಸಾರಿಗೆ ಸಂಪರ್ಕ ದೊರೆಯುವಂತಾಗಿದೆ ಎಂದರು.
ಯೂಟ್ಯೂಬ್ ಚಾನೆಲ್ ಹಾಗೂ ಇತರ ವೆಬ್ ಚಾನಲ್‌ಗಳ ನಿಯಂತ್ರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವಿನಿ ವೈಷ್ಣವ್, ಯೂಟ್ಯೂಬ್ ಚಾನೆಲ್‌ಗಳ ಕಂಟೆಂಟ್‌ಗಳಿಗೆ ಅವರೇ ಹೊಣೆಯಾಗಿದ್ದಾರೆ. ಅದಕ್ಕೆ ಅವರೇ ಜವಾಬ್ದಾರಿ ಸಹ ಹೊರಬೇಕಾಗುತ್ತದೆ ಎಂದರು.
ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಬೇಕು
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಬೇಡಿಕೆಯ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರಶ್ನಿಸಿದಾಗ, ಇದಕ್ಕೆ ಯೋಜನೆಯ ನಾಲ್ಕು ಪಾಲುದಾರ ರಾಜ್ಯಗಳ ಅನುಮತಿಯ ಅಗತ್ಯವಿದೆ ಎಂದರು.
ವಿಲೀನಕ್ಕೆ ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಅನುಮತಿ ಬೇಕಾಗುತ್ತದೆ. ಇದಕ್ಕಾಗಿ ಪ್ರಯತ್ನ ನಡೆಯುತ್ತಿದೆ. ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಒಪ್ಪಿಗೆ ಸಿಕ್ಕಿದರೆ ವಿಲೀನ ಪ್ರಕ್ರಿಯೆ ಮುಂದುವರಿಯಲಿದೆ ಎಂದರು.






