ಮಂಗಳೂರು ವಿವಿ ಅಂತರ ಕಾಲೇಜು ಅತ್ಲೆಟಿಕ್ಸ್ : ಆಳ್ವಾಸ್ ಮೂಡಬಿದ್ರೆ ತಂಡಕ್ಕೆ ಮತ್ತೆ ಸಮಗ್ರ ಚಾಂಪಿಯನ್ ಪಟ್ಟ

ಉಡುಪಿ, ನ.13: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಳಲ್ಲಿ ಇಂದು ಮುಕ್ತಾಯಗೊಂಡ ಮೂರು ದಿನಗಳ ಮಂಗಳೂರು ವಿವಿ ಅಂತರ ಕಾಲೇಜು ಅತ್ಲೆಟಿಕ್ ಕ್ರೀಡಾಕೂಟದಲ್ಲಿ ನಿರೀಕ್ಷೆಯಂತೆ ಮೂಡಬಿದ್ರೆಯ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಆಳ್ವಾಸ್ ಕಾಲೇಜು ತಂಡ 466 ಅಂಕಗಳನ್ನು ಸಂಗ್ರಹಿಸುವ ಮೂಲಕ ಸಮಗ್ರ ಚಾಂಪಿಯನ್ಪಟ್ಟ ಪಡೆದರೆ, ಉಜಿರೆಯ ಎಸ್ಡಿಎಂ ಕಾಲೇಜು 157 ಅಂಕಗಳೊಂದಿಗೆ ರನ್ನರ್ಅಪ್ ಪ್ರಶಸ್ತಿಗೆ ಭಾಜನವಾಯಿತು. ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೂರನೆ ಸ್ಥಾನ (46) ಪಡೆದುಕೊಂಡರೆ, ಆತಿಥೇಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ತಂಡ (36) ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿವೆ.
ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 233 ಅಂಕಗಳನ್ನು ಸಂಗ್ರಹಿಸುವ ಮೂಲಕ ತಂಡ ಪ್ರಶಸ್ತಿ ಪಡೆದರೆ, ಎಸ್ಡಿಎಂಎ ಉಜಿರೆ ತಂಡ 83 ಅಂಕಗಳೊಂದಿಗೆ ರನ್ನರ್ಅಪ್, ಆತಿಥೇಯ ತೆಂಕನಿಡಿಯೂರು ಕಾಲೇಜು 23 ಅಂಕಗಳೊಂದಿಗೆ ಮೂರನೇ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜು 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಗೆದ್ದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡಬಿದರೆ ತಂಡ 182 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಎಸ್ಡಿಎಂ ಉಜಿರೆ 74 ಅಂಕಗಳಿಸಿ ರನ್ನರ್ಅಪ್ ಸ್ಥಾನ ಗೆದ್ದು ಕೊಂಡರೆ, ಬೆಳ್ತಂಗಡಿಯ ಸರಕಾರಿ ಪದವಿ ಕಾಲೇಜು 36 ಅಂಕ ಸಂಗ್ರಹಿಸಿ ಮೂರನೇ ಹಾಗೂ ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು 31 ಅಂಕಗಳೊಂದಿಗೆ ನಾಲ್ಕನೇ ಸ್ಥಾನಿಯಾಯಿತು.
ಬೆಸ್ಟ್ ಅತ್ಲೀಟ್ಗಳು: ಪುರುಷರ 100ಮೀ.ನಲ್ಲಿ ಅತ್ಯುತ್ತಮ ಸಾದನೆ ಮಾಡಿದ ಆಳ್ವಾಸ್ನ ವಿಭಾಸ್ಕರ್ ಕುಮಾರ್ (1072ಅಂಕ) ಅವರು ಪುರುಷರ ವಿಭಾಗದ ಅತ್ಯುತ್ತಮ ಕ್ರೀಡಾಪಟುವಾಗಿ ಮೂಡಿಬಂದರೆ, ಮಹಿಳೆಯರ ವಿಭಾಗ ದಲ್ಲಿ 400ಮೀ.ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಆಳ್ವಾಸ್ನ ಮನಿಷಾ ಅವರು 995 ಅಂಕಗಳೊಂದಿಗೆ ಕೂಟದ ಅತ್ಯುತ್ತಮ ಮಹಿಳಾ ಕ್ರೀಡಾಪಟುವಾಗಿ ಘೋಷಿಸಲ್ಪಟ್ಟರು.
ಈ ಬಾರಿಯ ಕ್ರೀಡಾಕೂಟದಲ್ಲಿ ಎರಡು ಹೊಸ ಕೂಟ ದಾಖಲೆಗಳು ಮುರಿಯಲ್ಪಟ್ಟವು. ಪುರುಷರ 200ಮೀ. ಓಟದಲ್ಲಿ ಆಳ್ವಾಸ್ ಕಾಲೇಜಿನ ಅಂಕಿತ್ ಜೋಗಿ ಅವರು 21.1ಸೆ.ಗಳ ಸಾಧನೆಯೊಂದಿಗೆ 21.26ಸೆ.ಗಳ ಹಳೆಯ ದಾಖಲೆಯನ್ನು ಉತ್ತಮ ಪಡಿಸಿದರೆ, ಆಳ್ವಾಸ್ ಕಾಲೇಜಿನ 100ಮೀ. ರಿಲೇ ತಂಡ 41.0ಸೆ.ಗಳಲ್ಲಿ ಗುರಿಮುಟ್ಟುವ ಮೂಲಕ 41.45 ಸೆ.ಗಳ ಹಳೆಯ ದಾಖಲೆಯನ್ನು ಮುರಿಯಿತು.
ಪುರುಷರ 100ಮೀ. ಓಟದಲ್ಲಿ ಆಳ್ವಾಸ್ನ ವಿಭಾಸ್ಕರ್ ಕುಮಾರ್ ಅವರು 10.36ಸೆ.ಗಳ ಸಾಧನೆಯೊಂದಿಗೆ ಕೂಟದ ವೇಗದ ಓಟಗಾರನಾಗಿ ಮೂಡಿಬಂದರೆ, ಅದೇ ಕಾಲೇಜಿನ ಆರತಿ 12.3ಸೆ.ಗಳಲ್ಲಿ ಗುರಿಮುಟ್ಟುವ ಮೂಲಕ ಕೂಟದ ಅತ್ಯಂತ ವೇಗದ ಓಟಗಾರ್ತಿ ಎನಿಸಿಕೊಂಡರು. ಆರತಿ ಅವರು ಬಳಿಕ 200ಮೀ.ನಲ್ಲೂ ಚಿನ್ನದ ಪದಕ ಜಯಿಸಿದರು.
ಇಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ ವಹಿಸಿದ್ದರು. ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ಉಪನಿರ್ದೇಶಕರಾದ ಓಂಪ್ರಕಾಶ್, ದೈಹಿಕ ಶಿಕ್ಷಣ ಭೋದಕರ ಸಂಘದ ಅಧ್ಯಕ್ಷ ಎವರೆಸ್ಟ್ ರೊಡ್ರಿಗಸ್, ಕ್ರೀಡಾಕೂಟದ ವೀಕ್ಷಕರಾದ ಡಾ. ಹರಿದಾಸ್ ಕೂಳೂರು, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಡಾ. ಶ್ರೀದೇವಿ ಕೆ ಉಪಸ್ಥಿತರಿದ್ದರು.
ಜಿಲ್ಲಾ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.






