ಮೀನುಗಾರಿಕಾ ಕೃಷಿ ಉದ್ಯಮಕ್ಕೆ ವಿಶೇಷ ಬೇಡಿಕೆಯಿದೆ: ಸರೀಕ್ ರೇವನ್

ಬ್ರಹ್ಮಾವರ, ನ.14: ಮೀನುಗಾರಿಕೆ ಹಾಗೂ ಮೀನು ಸಾಕಾಣಿಕೆ ಕೃಷಿ ಉದ್ಯಮಕ್ಕೆ ಸಮಾಜದಲ್ಲಿ ಇಂದು ಹೆಚ್ಚಿನ ಬೇಡಿಕೆಯಿದೆ. ಕಡಿಮೆ ಬಂಡವಾಳ ಹೂಡಿಕೆಯೊಂದಿಗೆ ಉತ್ತಮ ಆದಾಯ ಗಳಿಸಲು ಈ ಉದ್ಯಮದಲ್ಲಿ ವಿಫುಲ ಅವಕಾಶಗಳಿವೆ. ಆದ್ದರಿಂದ ಶಿಬಿರಾರ್ಥಿಗಳು ತರಬೇತಿಯಲ್ಲಿ ಪಡೆದ ಜ್ಞಾನ ಮತ್ತು ಕೌಶಲ್ಯಗಳನ್ನು ಉದ್ಯಮದಲ್ಲಿ ಅಳವಡಿಸಿಕೊಂಡು ಸ್ವಉದ್ಯೋಗದಲ್ಲಿ ಯಶಸ್ವಿ ಹೆಜ್ಜೆ ಇಡುವಂತೆ ಕೆನರಾ ಬ್ಯಾಂಕ್‌ನ ಮರವಂತೆ ಶಾಖೆಯ ವ್ಯವಸ್ಥಾಪಕ ಸರೀಕ್ ರೇವನ್ ಕಿವಿಮಾತು ಹೇಳಿದ್ದಾರೆ.
ಬ್ರಹ್ಮಾವರದ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ ಹಾಗೂ ಮರವಂತೆ ಮೀನುಗಾರರ ಸಹಕಾರ ಸಂಘ ನಿಯಮಿತ, ಮರವಂತೆ ಇವರ ಜಂಟಿ ಆಶ್ರಯದಲ್ಲಿ ಮರವಂತೆ ಮೀನುಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಮೀನು ಸಾಕಾಣಿಕೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಮರವಂತೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ್ ಅವರು ಮಾತನಾಡಿ, ತರಬೇತಿಯಲ್ಲಿ ದೊರೆಯುವ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಯಶಸ್ವಿ ಉದ್ಯಮಿಗಳಾಗಿ ಬೆಳೆಯುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮರವಂತೆ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ರಾಜೇಶ್ ಮಾತನಾಡಿ, ಸಮಾಜದ ಮಹಿಳೆಯರು ಸ್ವ ಉದ್ಯೋಗವನ್ನು ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಯಶಸ್ವಿ ಉದ್ಯಮಿಗಳಾಗಬೇಕು ಎಂದು ಶುಭ ಹಾರೈಸಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಮಾತನಾಡಿ, ಶಿಬಿರಾರ್ಥಿಗಳು ತರಬೇತಿಯ ನಂತರ ಸ್ವ ಉದ್ಯೋಗ ಪ್ರಾರಂಭಿಸಲು ಅಗತ್ಯವಿರುವ ಬ್ಯಾಂಕ್ ಸಾಲ ಸೌಲಭ್ಯಗಳ ಕುರಿತು ಮಾರ್ಗದರ್ಶನ ಹಾಗೂ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಮರವಂತೆ ಮೀನುಗಾರರ ಸಹಕಾರ ಸಂಘದ ಉಪಾಧ್ಯಕ್ಷ ರತ್ನಾಕರ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್ ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕ ಸಂತೋಷ್ ಶೆಟ್ಟಿ ನಿರೂಪಿಸಿದರು. ಸಹಾಯಕ ಶಾಂತಪ್ಪ ಸ್ವಾಗತಿಸಿದರೆ ಮರವಂತೆ ಮೀನುಗಾರರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್ ವಂದಿಸಿದರು.






