ತಲಪಾಡಿ - ಕಾರವಾರ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಡಿಪಿಆರ್: ಸಂಸದ ಕೋಟ
ಕುಂದಾಪುರದಲ್ಲಿ ವಂದೇ ಭಾರತ್ ರೈಲಿಗೆ ಅದ್ಧೂರಿ ಸ್ವಾಗತ

ಕುಂದಾಪುರ, ನ.15: ಪ್ರಸ್ತುತ ಈಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದ ಒತ್ತಡ ಹೆಚ್ಚಿದ್ದು ಪರ್ಯಾಯ ಹೆದ್ದಾರಿ ಅನಿವಾರ್ಯ ಎಂಬುದನ್ನು ಮನಗಂಡು ಕೊಂಕಣ ರೈಲ್ವೆ ಪಕ್ಕದಲ್ಲಿ ತಲಪಾಡಿಯಿಂದ ಪ್ರಾರಂಭಿಸಿ ಶಿರೂರು ಒತ್ತಿನೆ ಣೆವರೆಗೆ, ಶಿರೂರಿನಿಂದ ಕಾರವಾರದವರೆಗೆ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಬಗ್ಗೆ ಡಿಪಿಆರ್ ಸಿದ್ಧಪಡಿಸಲು ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ವತಿಯಿಂದ ಕುಂದಾಪುರ ರೈಲು ನಿಲ್ದಾಣದಲ್ಲಿ ರವಿವಾರ ನಡೆದ ವಂದೇ ಭಾರತ್ ರೈಲು ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 10 ತಿಂಗಳಿನಲ್ಲಿ ನಡೆದ ರಸ್ತೆ ಅಪಘಾತ ದಲ್ಲಿ 94 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಬಹುತೇಕರು 25 ವರ್ಷದೊಳಗಿನವರು. ವಾಹನ ಸವಾರರ ಉಪ ಯೋಗಕ್ಕಾಗಿ ಹೆಜಮಾಡಿಯಿಂದ ಕುಂದಾಪುರದವರೆಗೆ 64 ಕಿ.ಮೀ. ಹೊಸ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ವಂದೇ ಭಾರತ್ ರೈಲು ಕುಂದಾಪುರದಲ್ಲಿ ಕೂಡ ನಿಲುಗಡೆಗೆ ಅನುಮತಿ ನೀಡಿರುವುದು ಸಂತಸದ ಸಂಗತಿ. ಪಂಚಗಂಗಾ ರೈಲಿಗೆ ಪರ್ಯಾಯವಾಗಿ ಇನ್ನೊಂದು ರೈಲನ್ನು ಪ್ರಾರಂಭಿಸುವ ಮತ್ತು ರೈಲ್ವೆ ವ್ಯವಸ್ಥೆಯನ್ನು ಬಲಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಬಿಎಸ್ಸೆನ್ನೆಲ್ ರಿಪೇರಿ ಮಾಡಲಾಗದ ಪರಿಸ್ಥಿತಿಗೆ ತಲುಪಿದೆ. ಈಗಿರುವ 250 ಟವರ್ ಬದಲು 600 ಟವರ್ ನಿರ್ಮಾಣ ಮಾಡಲಾಗಿದ್ದರೂ ವಿವಿಧ ತಾಂತ್ರಿಕ ಕಾರಣಗಳಿಂದ ಇದರಿಂದ ಪ್ರಯೋಜನವಿಲ್ಲವಾಗಿದೆ. ಮುಂದಿನ ದಿನಗಳಲ್ಲಿ ಬಿಎಸ್ಸೆನ್ನೆಲ್ ಸೆಟಲೈಟ್ ಫೋನ್ ಬಿಡುಗಡೆಯಾಗಲಿದೆ. ಕೇಂದ್ರ ಸರಕಾರ 6 ಸಾವಿರ ಕೋಟಿ ರೂ. ಖರ್ಚು ಮಾಡಿ ಭಾರತ್ ನೆಟ್‌ನ್ನು ಪ್ರಾರಂಭಿಸಿ ಉಡುಪಿ ಜಿಲ್ಲೆಯ 155 ಗ್ರಾಪಂಗಳಿಗೆ ಭಾರತ್ ನೆಟ್ ಸಂಪರ್ಕ ಆಗಿದ್ದರೂ ಈವರೆಗೆ 10 ಮನೆಗಳಿಗೂ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಸಂಬಂಧಪಟ್ಟ ಏಜೆನ್ಸಿಯನ್ನು ಕರೆದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ವಂದೇ ಭಾರತ್ ರೈಲನ್ನು ತರಲು ಮತ್ತು ಕುಂದಾಪುರದಲ್ಲಿ ನಿಲುಗಡೆಗೆ ಶ್ರಮಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೌರವಿಸಲಾಯಿತು. ಉದ್ಯಮಿಗಳಾದ ಜಯಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಲಯನ್ಸ್ ಜಿಲ್ಲಾ ರಾಜ್ಯಪಾಲ ರಾಜೀವ ಕೋಟ್ಯಾನ್, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಪ್ರಮುಖ ರಾದ ಗೌತಮ ಶೆಟ್ಟಿ, ಪ್ರಥ್ವಿ ಕುಂದರ್, ರಾಘವೇಂದ್ರ ಶೇಟ್, ಉದಯ ಭಂಡಾರ್‌ಕಾರ್, ಜೋಯ್ ಜೆ.ಕರ್ವಾಲ್ಲೊ, ನರೇಂದ್ರ ಕುಂದಾಪುರ, ನಾಗರಾಜ ಆಚಾರ್ಯ ನೇರಂಬಳ್ಳಿ ಉಪಸ್ಥಿತರಿದ್ದರು.
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ ಪುತ್ರನ್ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಸಂಚಾಲಕ ವಿವೇಕ ನಾಯಕ್ ಸ್ವಾಗತಿಸಿದರು.






