ಬ್ರಹ್ಮಾವರ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ

ಬ್ರಹ್ಮಾವರ, ನ.17: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್, ಯಕ್ಷಗಾನ ಕಲಾರಂಗ, ಪರ್ಯಾಯ ಶೀರೂರು ಮಠ, ಪ್ರದರ್ಶನ ಸಂಘಟನಾ ಸಮಿತಿ ಹಾಗು ಉಡುಪಿ, ಕಾಪು, ಕುಂದಾಪುರ, ಬೈಂದೂರು ಶಾಸಕರ ಪೂರ್ಣ ಸಹಕಾರ ದೊಂದಿಗೆ ಈ ಬಾರಿ ನಡೆಯಲಿರುವ ಜಿಲ್ಲೆಯ 99 ಶಾಲಾ ಮಕ್ಕಳ ಯಕ್ಷಗಾನ ಪ್ರದರ್ಶನ ‘ಕಿಶೋರ ಯಕ್ಷಗಾನ ಸಂಭ್ರಮ’ಕ್ಕೆ ಸೋಮವಾರ ಸಂಜೆ ಬ್ರಹ್ಮಾವರದಲ್ಲಿ ಚಾಲನೆ ನೀಡಲಾಯಿತು.
ಬ್ರಹ್ಮಾವರದ ಬಂಟರ ಭವನದ ಮುಂಭಾಗದಲ್ಲಿ ನಿರ್ಮಿಸಿದ ಕೃಷ್ಣಸ್ವಾಮಿ ಜೋಯಿಸ್ ವೇದಿಕೆಯಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ ಗೊಂಡಿತು. ಟ್ರಸ್ಟ್ನ ಅಧ್ಯಕ್ಷರೂ ಆಗಿರುವ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಜ್ಯೋತಿ ಬೆಳಗಿಸಿ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಸಂಪತ್ ಕುಮಾರ್, ನ್ಯಾಯವಾದಿ ಬೈಕಾಡಿ ಸುಪ್ರಸಾದ ಶೆಟ್ಟಿ, ಬಂಟರ ಭವನದ ಸಂಚಾಲಕ ಸಿ. ಭುಜಂಗ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಇದರ ಅಧ್ಯಕ್ಷ ಮೈರ್ವಾಡಿ ಅಶೋಕ ಕುಮಾರ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷ ಬಿ. ಎನ್. ಶಂಕರ್ ಪೂಜಾರಿ, ಮಾಜಿ ಲಯನ್ಸ್ ಗವರ್ನರ್ ಜ್ಞಾನವಸಂತ, ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾ ಡಿದರು. ಬ್ರಹ್ಮಾವರ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದೇವಾನಂದ ನಾಯಕ್ ವಂದಿಸಿದರು.
ಬಳಿಕ ಮೊದಲ ದಿನ ಸರಕಾರಿ ಪ್ರೌಢಶಾಲೆ ನಾಲ್ಕೂರು ಇಲ್ಲಿಯ ವಿದ್ಯಾರ್ಥಿಗಳಿಂದ ಮಹೇಶ್ ಮಂದಾರ್ತಿ ನಿರ್ದೇಶನದಲ್ಲಿ ಧ್ರುವ ಚರಿತ್ರೆ ಮತ್ತು ಬ್ರಹ್ಮಾವರದ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ನರಸಿಂಹ ತುಂಗರ ನಿರ್ದೇಶನದಲ್ಲಿ ಶ್ರೀಕೃಷ್ಣ ಪಾರಿಜಾತ ಯಕ್ಷಗಾನ ಪ್ರಸ್ತುತಗೊಂಡಿತು.






