ಅನಧೀಕೃತ ಹೋಂ ಸ್ಟೇಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಕೋಡಿ ಗ್ರಾಪಂ ಎದುರು ಗ್ರಾಮಸ್ಥರ ಧರಣಿ

ಕೋಟ, ನ.20: ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಮೀಪದ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿರುವ ಅನಧೀಕೃತ ಹೋಂ ಸ್ಟೇಗಳು ಪರಾವನಿಗೆ ಹೊಂದುವ ತನಕ ಅವುಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ 4ನೇ ಕೋಡಿ ಗ್ರಾ.ಪಂ ಎದುರು ಗ್ರಾಮಸ್ಥರು ಧರಣಿ ನಡೆಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಪ್ರಮುಖ ಸುದೀನ, ಈ ಭಾಗದಲ್ಲಿ ಹೋಂ ಸ್ಟೇಗಳು ಅಕ್ರಮ ದಂಧೆ ಯಾಗಿದೆ. ತೆರಿಗೆ ವಂಚನೆ, ಸಿಆರ್ಝಡ್ ಉಲ್ಲಂಘನೆ, ಹಕ್ಕುಪತ್ರ ದುರುಪಯೋಗ ಮೊದಲಾದ ಅಕ್ರಮಗಳು ಕಣ್ಣಿಗೆ ಕಾಣಿಸುತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂದಪಟ್ಟ ಇಲಾಖೆ, ಸಕ್ಷಮ ಪ್ರಾಧಿಕಾರಗಳು ಕೂಡ ಬಂಡವಾಳ ಶಾಹಿಗಳ ಪರ ನಿಲುವು ತೋರುತ್ತಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದರು.
ಸ್ಥಳೀಯ ನಿವಾಸಿ ಜ್ಯೋತಿ ಮಾತನಾಡಿ, ನಗರ ಪ್ರದೇಶದಲ್ಲಿ ಹಕ್ಕುಪತ್ರದ ದರ 500 ರೂ. ಇದ್ದು ಗ್ರಾಮೀಣ ಪ್ರದೇಶವಾದ ಕೋಡಿ ಗ್ರಾಮದಲ್ಲಿ ಹಕ್ಕುಪತ್ರಕ್ಕೆ ಇದ್ದ ದರ 5000ರೂ.ನಿಂದ ಇದೀಗ 9 ಸಾವಿರ ರೂ.ಗೆ ಏರಿದೆ. ಗ್ರಾಮದಲ್ಲಿ ಇಷ್ಟು ಜಾಸ್ಥಿಯಾಗಲು ಭೂಮಿಗೆ ಬೇಡಿಕೆ ಹಾಗೂ ಮೌಲ್ಯ ಹೆಚ್ಚಾಗಿರುವುದು ಕಾರಣ. ಆದರೆ ನಾವು ವಾಸವಿರುವುದು ಮನೆಯಲ್ಲಿ ನಮ್ಮದು ವ್ಯವಹಾರವಲ್ಲ. ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆಯಾಗಬಾರದು. ಹಕ್ಕುಪತ್ರದ ದರ ಕಮ್ಮಿ ಮಾಡಬೇಕು ಎಂದರು.
ಹೋಂಸ್ಟೇಗೆ ನೋಟಿಸ್ ಜಾರಿ: ಧರಣಿ ಸ್ಥಳಕ್ಕಾಗಮಿಸಿದ ಕೋಡಿ ಗ್ರಾ.ಪಂ ಪಿಡಿಒ ರವೀಂದ್ರ, ಧರಣಿನಿರತರ ಮನವೊಲಿಕೆಗೆ ಮುಂದಾದರು. ಆದರೆ ಧರಣಿನಿರತರು ಅದಕ್ಕೆ ಜಗ್ಗದೆ ಧರಣಿ ಮುಂದುವರೆಸಿದರು. ಸೂಕ್ತ ಕಾನೂನು ಕ್ರಮ ಕೈಗೊಳ್ಳುವವರೆಗೆ ಗ್ರಾ.ಪಂ ಎದುರೇ ಕೂರುವುದಾಗಿ ಎಚ್ಚರಿಕೆ ನೀಡಿದರು.
ಬಳಿಕ ಗ್ರಾಮಸ್ಥರು ಆರೋಪಿಸಿದ ಹೋಂಸ್ಟೇಗೆ ನೋಟಿಸ್ ಜಾರಿಗೊಳಿಸಿ ಅದರ ಪ್ರತಿಯನ್ನು ಪ್ರತಿಭಟನಾಕಾರರಿಗೆ ನೀಡಿದ ಬಳಿಕ ಪ್ರತಿಭಟನೆ ವಾಪಾಸ್ ಪಡೆಯಲಾಯಿತು. ಈಗಾಗಲೇ ಸಂಬಂಧಪಟ್ಟ ಹೋಂ ಸ್ಟೇಗೆ 2 ಬಾರಿ ನೋಟಿಸ್ ನೀಡಲಾಗಿದೆ. ಶುಕ್ರವಾರ ಕೊನೆಯದಾಗಿ 3 ನೇ ನೋಟಿಸ್ ನೀಡಿ ಉತ್ತರಿಸಲು 1 ವಾರ ಗಡುವು ನೀಡಲಾಗಿದ್ದು ಮೂರನೇ ನೋಟಿಸ್ಗೂ ಸ್ಪಂದಿಸದೆ, ಸರಿಯಾದ ದಾಖಲೆ ನೀಡದಿದ್ದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಪಿಡಿಒ ರವೀಂದ್ರ ಹೇಳಿದರು.
ಈ ವೇಳೆ ಗ್ರಾಪಂ ಆಡಳಿತಾಧಿಕಾರಿ ಅನುಷಾ ಭಟ್ ಹಾಜರಿದ್ದರು. ಧರಣಿಯಲ್ಲಿ ಸ್ಥಳೀಯ ಹಿರಿಯರಾದ ಕೃಷ್ಣ ಮಾಸ್ಟರ್, ಪ್ರಮುಖರಾದ ಲೋಹಿತ್ ಕುಂದರ್, ಮಾದವ ಕುಂದರ್, ಸತೀಶ್, ಸಂತೋಷ, ಕೃಷ್ಣ, ಸುಜಾತ, ಜ್ಯೋತಿ ಖಾರ್ವಿ, ಬೇಬಿ, ಲೋಹಿತ್ ಖಾರ್ವಿ, ರಾಜು ಮೊದಲಾದವರಿದ್ದರು.
‘ಇಲ್ಲಿಗೆ ಆಗಮಿಸುವ ಪ್ರವಾಸಿಗರು ಸಮುದ್ರದ ಆಳ ತಿಳಿಯದೇ ನೀರಿಗಿಳಿದು ಅಪಾಯ ತಂದೊಡ್ಡಿಕೊಳ್ಳುತ್ತಾರೆ. ಬೊಬ್ಬೆ, ಕೂಗಾಟ, ಅಕ್ರಮ ಚಟುವಟಿಕೆಗಳಿಂದ ಸ್ಥಳೀಯರು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಬಡವರಿ ಗೊಂದು ಶ್ರೀಮಂತರಿಗೊಂದು ನ್ಯಾಯ ಆಗಬಾರದು. ನೆಮ್ಮದಿಯಾಗಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು’
-ಜ್ಯೋತಿ, ಸ್ಥಳೀಯರು
‘ಸರಕಾರದ ಆದೇಶದಂತೆ ಮೊದಲು ಹಕ್ಕುಪತ್ರ ಪಡೆಯಲು ಸೆಂಟ್ಸ್‌ಗೆ 5 ಸಾವಿರ ಕಟ್ಟಬೇಕಿದ್ದ ಹಣ ಇದೀಗ 9 ಸಾವಿರ ಆಗಿದೆ. ಇಲ್ಲಿನ ಜಾಗದ ಮೌಲ್ಯ ಜಾಸ್ತಿಯಾಗಿದ್ದು ಕಾರಣ ಎನ್ನಲಾಗುತ್ತಿದೆ. ಹಕ್ಕುಪತ್ರದ ಜಾಗದಲ್ಲಿ ಅನಧೀಕೃತ ಹೋಂಸ್ಟೇ ನಡೆಸುತ್ತಿರುವ ಕಾರಣ ಇಲ್ಲಿನ ಭೂಮಿಗಳ ಮೌಲ್ಯ ಏರಲು ಕಾರಣವಾಗಿದೆ. ಯಾವುದೇ ಅನುಮತಿಯಿಲ್ಲದೆ ನಿರಪೇಕ್ಷಣ ಪತ್ರ ನೀಡಲಾಗಿದೆ. ಗ್ರಾಪಂ ನೀಡಿದ ನೋಟಿಸ್‌ಗೂ ಕಿಮ್ಮತ್ತು ನೀಡುತ್ತಿಲ್ಲ. ಸಿ.ಆರ್.ಝಡ್ ಅನುಮತಿ, ಕಟ್ಟಡ ಪರವಾನಿಗೆ ಇಲ್ಲದೆ 2 ಕೋಟಿ ಮೌಲ್ಯದ ಕಟ್ಟಡ ನಿರ್ಮಿಸಿದ್ದು ಹೇಗೆ?. ಇಂತಹ ಅಕ್ರಮ ಹೋಂಸ್ಟೇಗಳಿಂದ ಹಕ್ಕುಪತ್ರದ ದರ ಏರುತ್ತಿದೆ. ನೈಜ್ಯ ಫಲಾನುಭವಿಗಳು ಸಮಸ್ಯೆ ಎದುರಿಸುವಂತಾಗಿದೆ’
-ಸುದಿನ, ಸ್ಥಳೀಯ ಹೋರಾಟಗಾರರು






