ಆಯುರ್ವೇದದ ಪರಂಪರೆ ವಿಶ್ವದೆಲ್ಲೆಡೆ ಪಸರಿಸುವುದು ಪದವೀಧರರ ಜವಾಬ್ದಾರಿ: ಡಾ.ಸುಶ್ರುತ ಕನೌಜಿಯಾ

ಉಡುಪಿ, ನ.21: ಆಯುರ್ವೇದ ಪದವೀಧರರು ಶ್ರೇಷ್ಠ ಪರಂಪರೆ ಮತ್ತು ಮೌಲ್ಯಗಳನ್ನು ತಮ್ಮ ವೃತ್ತಿಜೀವನದ ಮೂಲಕ ವಿಶ್ವದಾದ್ಯಂತ ಪಸರಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಭಾರತೀಯ ವೈದ್ಯಕೀಯ ಪದ್ಧತಿಯ ನೈತಿಕತೆ ಮತ್ತು ನೋಂದಣಿ ಮಂಡಳಿ, ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪದ್ಧತಿ ಆಯೋಗದ ಅಧ್ಯಕ್ಷ ಡಾ.ಸುಶ್ರುತ ಕನೌಜಿಯಾ ಹೇಳಿದ್ದಾರೆ.
ಉಡುಪಿ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶನಿವಾರ ನಡೆದ 2026ನೇಸಾಲಿನ ಪದವಿ ಪ್ರದಾನ ಸಮಾರಂಭ ‘ವಿಶಿಖಾನುಪ್ರವೇಶ’ದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.
ಮಹಿಳಾ ಪದವೀಧರರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ನಿರ್ವ ಹಿಸುವುದರಿಂದ ಹಿಂದೆ ಸರಿಯದೆ, ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಮಾತನಾಡಿ, ಪದವೀಧರರು ಆಯುರ್ವೇದವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು. ಸಂಶೋಧನೆಯ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡು, ಹೊಸ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಯುವ ಪೀಳಿಗೆಯನ್ನು ಆಯುರ್ವೇದ ಅಧ್ಯಯನದತ್ತ ಆಕರ್ಷಿಸುವ ಕಾರ್ಯದಲ್ಲಿ ಪದವೀಧರರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸ್ನಾತಕ ಪದವೀಧರರಿಗೆ, ಸ್ನಾತಕೋತ್ತರ ಪದವೀಧರರಿಗೆ ಪದವಿ ಹಾಗೂ ರ್ಯಾಂಕ್ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ಡೀನ್(ಆಡಳಿತ) ಡಾ.ಪ್ರಶಾಂತ್ ಕೆ. ಪದವೀಧರರಿಗೆ ವೈದ್ಯಕೀಯ ವೃತ್ತಿಯ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಜಯಕೃಷ್ಣ ನಾಯಕ್, ಸ್ನಾತಕ ವಿಭಾಗದ ಡೀನ್ ಡಾ.ಪೃಥ್ವಿರಾಜ್ ಪುರಾಣಿಕ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಸ್ವಾಗತಿಸಿದರು. ಸ್ನಾತಕೋತ್ತರ ಮತ್ತು ಪಿಎಚ್.ಡಿ. ವಿಭಾಗದ ಡೀನ್ ಡಾ.ಶ್ರೀಕಾಂತ್ ಪಿ. ವಂದಿಸಿದರು. ಡಾ.ಶುಭಾ ಪಿ.ಯು. ಮತ್ತು ಡಾ.ಮೇಘನಾ ಕೆ.ಎ. ಕಾರ್ಯಕ್ರಮ ನಿರೂಪಿಸಿದರು.






