ಗೂಡ್ಸ್ ಟೆಂಪೋ ಮರಕ್ಕೆ ಢಿಕ್ಕಿ: ಚಾಲಕ ಮೃತ್ಯು, ಐವರಿಗೆ ಗಾಯ

ಅಜೆಕಾರು, ನ.21: ಗೂಡ್ಸ್ ಟೆಂಪೋವೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು, ಐವರು ಮಹಿಳೆಯರು ಗಾಯಗೊಂಡ ಘಟನೆ ಅಂಡಾರು ಗ್ರಾಮದ ಹೆರ್ಗಬೆಟ್ಟು ಎಂಬಲ್ಲಿ ನ.21ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಟೆಂಪೋ ಚಾಲಕ ಸೀತಾರಾಮ ರೈ ಎಂದು ಗುರುತಿಸಲಾಗಿದೆ. ಟೆಂಪೊದಲ್ಲಿದ್ದ ಅಂಡಾರು ನಿವಾಸಿ ಗಳಾದ ಶಾಲಿನಿ, ಪ್ರೇಮಾ, ವಸಂತಿ, ಲಲಿತ, ಶೋಭಾ ಎಂಬವರು ಗಾಯಗೊಂಡಿದ್ದಾರೆ.
ಅಂಡಾರು ಜಂಕ್ಷನ್ನಿಂದ ಕಾಡುಹೊಳೆ ಮಾರ್ಗವಾಗಿ ಹೋಗುತ್ತಿದ್ದ ಗೂಡ್ಸ್ ಟೆಂಪೋ, ಅತೀವೇಗದಿಂದ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಚಾಲಕ ಸೀತಾರಾಮ ರೈ, ಅವರ ಎಡಬದಿ ಸೀಟಿನಲ್ಲಿ ಕುಳಿತಿದ್ದ ಶಾಲಿನಿ, ಹಿಂಬದಿಯಲ್ಲಿ ಕುಳಿತಿದ್ದ ಪ್ರೇಮಾ, ವಸಂತಿ, ಲಲಿತ, ಶೋಭಾ ಎಂಬವರು ಗಾಯಗೊಂಡರು.
ಇದರಲ್ಲಿ ಗಂಭೀರವಾಗಿ ಗಾಯಗೊಂಡ ಸೀತಾರಾಮ ರೈ ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




