ಕಾವ್ಯಾಧ್ಯಯನ ಮಾಹಿತಿ ಇಂದಿನ ತಲೆಮಾರಿಗಿಲ್ಲ: ಪ್ರೊ.ಎ.ವಿ.ನಾವಡ

ಉಡುಪಿ, ನ.22: ನಾಡಿನಲ್ಲಿ ಕವಿಗಳಿಗೆ ಬರಗಾಲವಿಲ್ಲ. ಯುವ ಕವಿ- ಕವಯಿತ್ರಿಗಳು ಹುಟ್ಟುತ್ತಲೇ ಇದ್ದಾರೆ. ಆದರೆ ಹಿರಿಯ ಕವಿಗಳ ಬಗ್ಗೆ ಓದು ಇಲ್ಲವಾಗಿದೆ. ಬೇಂದ್ರೆ, ಕುವೆಂಪು, ಪುತಿನ ಸೇರಿದಂತೆ ಹಲವು ಹಿರಿಯ ಕವಿಗಳನ್ನು ಯುವ ಜನತೆ ಮರೆತಿದ್ದಾರೆ. ಅವರೆಲ್ಲರ ಕಾವ್ಯಾಧ್ಯಯನ ಮಾಹಿತಿ ಇಂದಿನ ತಲೆಮಾರಿಗಿಲ್ಲ. ಅವರ ಬಗ್ಗೆ ಅರಿತು ಅವರ ಸಾಧನೆಯ ಮಾರ್ಗದಲ್ಲಿ ಮುಂದೆ ಸಾಗಬೇಕಾಗಿದೆ ಎಂದು ಹಿರಿಯ ವಿದ್ವಾಂಸ ಮಂಗಳೂರಿನ ಪ್ರೊ.ಎ.ವಿ.ನಾವಡ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ರವಿವಾರ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ವಿಶ್ವಪ್ರಭಾ ಸಭಾಂಗಣದಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವದ ತಿಂಗಳ ಸಡಗರದ ’ಬಹುಭಾಷಾ ಕವಿಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ ಎಚ್.ಪಿ. ವಹಿಸಿದ್ದರು. ಉಡುಪಿ ಜಿಲ್ಲಾ ಕಸಾಪ ಸ್ಥಾಪಕ ಗೌರವ ಕಾರ್ಯದರ್ಶಿ ರಂಗಪ್ಪಯ್ಯ ಹೊಳ್ಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಂಸತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು.ವಿಶ್ವನಾಥ ಶೆಣೈ, ಕವಿಗೋಷ್ಠಿಯ ಸಂಚಾಲಕ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ 21 ಹಿರಿಯ ಕಿರಿಯ ಕವಿಗಳು ಪಾಲ್ಗೊಂಡು ಕನ್ನಡ, ಸಂಸ್ಕೃತ, ತುಳು, ಕೊಂಕಣಿ, ಹಿಂದಿ, ಹವಿಗನ್ನಡ ಭಾಷೆಗಳಲ್ಲಿ ಸ್ವರಚಿತ ಕಾವ್ಯ ವಾಚಿಸಿದರು. ಅಂತಿಮ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಚಿಂತೆ ನಿವಾರಿಸಲು ಅನುಕೂಲವಾಗಲು ಮಣಿಪಾಲ ಟೌನ್ ರೋಟರಿ ಕ್ಲಬ್ನಿಂದ ಲೈಬ್ರರಿ ಆರಂಭಿಸುತ್ತಿದ್ದು, ಅದಕ್ಕೆ ಕಸಾಪ ಉಡಪಿ ಘಟಕದ ’ಮನೆಯೇ ಗ್ರಂಥಾಲಯ ಅಭಿಯಾನ’ದ 220ನೇ ಸಂಚಿಕೆಯನ್ನು ಆಶಾಲತಾ ಅವರಿಗೆ ಹಸ್ತಾಂತರಿಸಲಾಯಿತು.
ಅನಿರುದ್ಧ ಭಟ್ ಪಣಿಯಾಡಿ ಪ್ರಾರ್ಥಿಸಿದರು. ರಾಜೇಶ ಭಟ್ ಪಣಿಯಾಡಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ರಂಜನಿ ವಸಂತ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಹಾಗೂ ಸತೀಶ ಕೊಡವೂರು ಸಮಗ್ರ ನಿರ್ವಹಣೆ ಮಾಡಿದರು.






