ಬ್ರಹ್ಮಾವರ: ಕಿಶೋರ ಯಕ್ಷಗಾನ ಸಂಭ್ರಮ ಸಮಾರೋಪ

ಬ್ರಹ್ಮಾವರ, ನ.23: ಬ್ರಹ್ಮಾವರ ಬಂಟರ ಭವನದ ಎದುರು ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾ ಗಿದ್ದ ‘ಕಿಶೋರ ಯಕ್ಷಗಾನ ಸಂಭ್ರಮ-2026’ರ ಸಮಾರೋಪ ಸಮಾರಂಭ ರವಿವಾರ ರಾತ್ರಿ ನಡೆಯಿತು.
ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಯಕ್ಷಗಾನ ವೇಷ ಧರಿಸಿ ಪ್ರದರ್ಶನ ನೀಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇಂದು ವಿದ್ಯಾರ್ಥಿಗಳು ಇನ್ನೊಬ್ಬರಿಗೂ ಹೇಳಿ ಕೊಡುವ ಮಟ್ಟಿಗೆ ಕಲಾ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಬ್ರಹ್ಮಾವರ ಪ್ರದರ್ಶನದಲ್ಲಿ 14 ಶಾಲೆಗಳ ಪ್ರದರ್ಶನ ಪೂರ್ಣಗೊಂಡಿದ್ದು, ಪ್ರದರ್ಶನದಲ್ಲಿ 485 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 321 ಮಂದಿ ಹುಡುಗಿಯರೆ ಆಗಿರುವುದು ಹೆಮ್ಮೆಯ ವಿಚಾರ ಎಂದು ಅವರು ವಿವರಿಸಿದರು.
ಸಮಾರಂಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಹಾರಾಡಿ ನಿತ್ಯಾನಂದ ಶೆಟ್ಟಿ, ನ್ಯೂ ಬಿಲ್ಡರ್ಸ್ ಡೆವಲಪರ್ಸ್ನ ಮಾಲಿಕ ಚೇತನ್ ಕುಮಾರ್ ಶೆಟ್ಟಿ, ಉದ್ಯಮಿ ಉಮಾಶಂಕರ ಶೆಟ್ಟಿ, ಪ್ರದರ್ಶನ ಸಂಘಟನಾ ಸಮಿತಿ ಕಾರ್ಯದರ್ಶಿ ದೇವಾನಂದ ನಾಯಕ್ ಮಾತನಾಡಿ ವಿದ್ಯಾರ್ಥಿಗಳ ಕಲಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಭಾಗವಹಿಸಿದ ಎಲ್ಲಾ ಶಾಲೆಗಳಿಗೆ ಪ್ರಮಾಣಪತ್ರ ಮತ್ತು ತಂಡದ ಛಾಯಾಚಿತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಕೋಶಾಧಿಕಾರಿ ಶೋಭಾ ಪೂಜಾರಿ ವಂದಿಸಿದರು. ಯಕ್ಷಶಿಕ್ಷಣ ಟ್ರಸ್ಟ್ನ ಕೋಶಾಧಿಕಾರಿ ಪ್ರಭಾಕರ ಭಂಡಿ, ಯಕ್ಷಗಾನ ಕಲಾರಂಗದ ಸದಸ್ಯರಾದ ನಾರಾಯಣ ಎಂ. ಹೆಗಡೆ, ಡಾ.ರಾಜೇಶ್ ನಾವುಡ, ನಾಗರಾಜ ಹೆಗಡೆ, ವಸಂತ ಆರ್. ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.






