ಜು. 1ರಿಂದ ಕಲಾವಿದರಿಗೆ ಯಕ್ಷಗಾನ ಮಾರ್ಗದರ್ಶಿ ಶಿಬಿರ
ಉಡುಪಿ : ಉಡುಪಿ ಯಕ್ಷಗಾನ ಕಲಾರಂಗ ವೃತ್ತಿ ಮೇಳದ ಯುವ ಕಲಾವಿದರಿಗೆ ನಾಲ್ಕು ದಿನಗಳ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’ ಆಯೋಜಿಸಿದ್ದು, ಈ ಸನಿವಾಸ ಶಿಬಿರವು ಇದೆ ಜುಲೈ 1ರಿಂದ ಜುಲೈ 4ರ ವರೆಗೆ ಯಕ್ಷಗಾನ ಕಲಾರಂಗದ ಕಟ್ಟಡದಲ್ಲಿ ಜರಗಲಿದೆ.
ಜುಲೈ 1ರಂದು ಪೂರ್ವಾಹ್ನ 10:30ಕ್ಕೆ ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಹರಿನಾರಾ ಯಣದಾಸ ಅಸ್ರಣ್ಣ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಎಂ. ಗಂಗಾಧರ ರಾವ್ ಅವರ ಅಧ್ಯಕ್ಷತೆಯಲ್ಲಿ ಜರಗುವ ಸಮಾರಂಭದಲ್ಲಿ ಕಲಾಪೋಷಕ ಪಣಂಬೂರು ವಾಸುದೇವ ಐತಾಳರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಬಡಗು-ತೆಂಕುತಿಟ್ಟಿನ ವಿವಿಧ ಮೇಳಗಳ 40 ಯುವ ಕಲಾವಿದರು ಭಾಗವಹಿಸುತ್ತಿದ್ದಾರೆ. ಶಿಬಿರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ರಸ ಭಾವಾಭಿವ್ಯಕ್ತಿ, ಅರ್ಥಗಾರಿಕೆ, ಕಲೆಯಲ್ಲಿ ಔಚಿತ್ಯಪ್ರಜ್ಞೆ, ಪ್ರಸಂಗಾಧ್ಯಯನ, ಅನ್ಯಪ್ರಕಾರಗಳ ಪರಿಚಯ, ಆಕಾರ ಗ್ರಂಥಗಳ ಓದು ಹೀಗೆ ಈ ಮಾರ್ಗದರ್ಶಿ ಶಿಬಿರದಲ್ಲಿ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು. ಹಳೆಯ ಯಕ್ಷಗಾನದ ಮಾದರಿಗಳ ಸಿಡಿಗಳನ್ನು ಸಹ ಶಿಬಿರಾರ್ಥಿಗಳಿಗೆ ತೋರಿಸಲಾಗುವುದು ಎಂದು ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.







