ಉಡುಪಿ: ಜ.1ರಿಂದ 32ನೇ ಮದ್ಯ ವ್ಯಸನ ವಿಮುಕ್ತಿ ವಸತಿ ಶಿಬಿರ

ಸಾಂದರ್ಭಿಕ ಚಿತ್ರ
ಉಡುಪಿ: ಕಮಲ್ ವಿ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇವರ ಆಶ್ರಯದಲ್ಲಿ 32ನೇ ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರ ಜ.1ರಿಂದ 10ರವರೆಗೆ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಮನೋವೈದ್ಯ ಡಾ.ಮಾನಸ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಜ.1ರಂದು ಬೆಳಗ್ಗೆ 10ಗಂಟೆಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಯೆನೆಪೋಯಾ ವಿವಿಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಕಾಕುಂಜೆ ಹಾಗೂ ಐಎಂಐ ಉಡುಪಿ-ಕರಾವಳಿಯ ಅಧ್ಯಕ್ಷೆ ಹಾಗೂ ಖ್ಯಾತ ಪ್ರಸೂತಿ ತಜ್ಞೆ ಡಾ.ರಾಜಲಕ್ಷ್ಮೀ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಸ್ಪತ್ರೆಯ ನಿರ್ದೇಶಕ ಹಾಗೂ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿಬಿರದ ಸಮಾರೋಪ ಸಮಾರಂಭ ಜ.10ರಂದು ಬೆಳಗ್ಗೆ 10ಗಂಟೆಗೆ ಡಾ. ಪಿ.ವಿ.ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಮಣಿಪಾಲ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಟಿ.ವಿ., ಐಎಂಎಯ ಕಾರ್ಯದರ್ಶಿ ಡಾ.ಅರ್ಚನಾ ಭಕ್ತ ಹಾಗೂ ಕೆಎಂಸಿ ಮಣಿಪಾಲದ ಪ್ರಾಧ್ಯಾಪಕ ಡಾ.ವಿನೋದ್ ಸಿ.ನಾಯಕ್ ಮುಖ್ಯ ಅತಿಥಿಗಳಾಗಿರುವರು.
ಡಾ.ಎ.ವಿ.ಬಾಳಿಗಾ ಆಸ್ಪತ್ರೆ ಕಳೆದ 20 ವರ್ಷಗಳಿಂದ ಜಿಲ್ಲೆಯಾದ್ಯಂತ ಮದ್ಯವ್ಯಸನದಿಂದ ಆಗುವ ದುಷ್ಪರಿಣಾಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಹಾಗೂ ಅದಕ್ಕೆ ಚಿಕಿತ್ಸೆ ನೀಡುವ ಕಾರ್ಯ ಮಾಡುತ್ತಾ ಬಂದಿದೆ. ಇದುವರೆಗೆ 31 ಶಿಬಿರಗಳನ್ನು ಆಯೋಜಿಸಿದ್ದು, ಇದರಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಕೊರಗ ಸಮುದಾ ಯದವರಿಗೆಂದೇ 10 ವಿಶೇಷ ಶಿಬಿರಗಳನ್ನು ಆಯೋಜಿಸಿದ್ದೇವೆ ಎಂದು ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ತಿಳಿಸಿದರು.
ಕಾರವಾರದ ಪೊಲೀಸ್ ಸಿಬ್ಬಂದಿಗಳಿಗೆಂದೇ ವಿಶೇಷ ಶಿಬಿರವನ್ನೂ ಆಯೋಜಿಸಲಾಗಿತ್ತು. ಇದುವರೆಗೆ ಈ ಎಲ್ಲಾ ಶಿಬಿರ ಗಳಲ್ಲಿ 2000ಕ್ಕೂ ಅಧಿಕ ಮದ್ಯವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಶೇ.21ರಷ್ಟು ಮಂದಿ ಮದ್ಯವ್ಯಸನದಿಂದ ಸಂಪೂರ್ಣ ವಿಮುಕ್ತರಾಗಿ ಜೀವನ ಸಾಗಿಸುತಿದ್ದಾರೆ ಎಂದೂ ಅವರು ವಿವರಿಸಿದರು.
ಪ್ರಸ್ತುತ ಶಿಬಿರದಲ್ಲಿ 50 ಮಂದಿ ಭಾಗವಹಿಸಲಿದ್ದಾರೆ. ಇವರಿಗೆ 10 ದಿನಗಳ ಊಟ, ವಸತಿ ಹಾಗೂ ಚಿಕಿತ್ಸಾ ವೆಚ್ಚವನ್ನು ಟ್ರಸ್ಟ್ ಭರಿಸಲಿದೆ. ಇಲ್ಲಿ ಮಹಿಳಾ ಮದ್ಯವ್ಯಸನಿಗಳಿಗಾಗಿ ಪ್ರತ್ಯೇಕ ವಾರ್ಡ್ನ್ನು ಪ್ರಾರಂಭಿಸಲಾಗಿದೆ. ಇದರಿಂದ ಮಹಿಳೆಯರೂ ಯಾವುದೇ ಸಂಕೋಚವಿಲ್ಲದೇ ಚಿಕಿತ್ಸೆ ಪಡೆಯಬಹುದು ಎಂದು ಡಾ.ದೇವರಮನೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮನೋವೈದ್ಯ ಡಾ.ದೀಪಕ್ ಮಲ್ಯ, ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ, ಆಪ್ತಸಮಾಲೋಚಕ ನಾಗರಾಜ ಮೂರ್ತಿ ಉಪಸ್ಥಿತರಿದ್ದರು.







