ಮಣಿಪಾಲ: ಆ.10ರಂದು ನಾಲ್ಕನೇ ಫ್ರೀಡಂ ರನ್

ಉಡುಪಿ, ಜು.2: ಕೆನರಾ ಬ್ಯಾಂಕಿನ ಮಣಿಪಾಲ ವೃತ್ತ ಕಚೇರಿಯ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುಂದಿನ ಆ.10ರಂದು ರವಿವಾರ ‘ಫ್ರೀಡಂ ರನ್’ನ ನಾಲ್ಕನೇ ಆವೃತ್ತಿ ಮಣಿಪಾಲದಲ್ಲಿ ನಡೆಯಲಿದೆ ಎಂದು ಸ್ಪರ್ಧೆಯ ಸಂಯೋಜಕರಲ್ಲಿ ಒಬ್ಬರಾದ ಸಚಿನ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾರಥಾನ್‌ನ ನಾಲ್ಕನೇ ಆವೃತ್ತಿ ದೇಶದ ವೀರಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ನಡೆಯಲಿದೆ. ಸ್ಪರ್ಧೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ ಎಂದ ಅವರು 21ಕಿ.ಮೀ.ನ ಹಾಫ್ ಮ್ಯಾರಥಾನ್ ಅಲ್ಲದೇ 10ಕಿಮೀ, 5ಕಿ.ಮೀ ಹಾಗೂ 3ಕಿ.ಮೀ.ನಲ್ಲಿ ನಡೆಯಲಿದೆ ಎಂದರು.
ಸ್ಪರ್ಧೆ ಆ.10ರ ರವಿವಾರ ಮುಂಜಾನೆ 5ಗಂಟೆಗೆ ಮಣಿಪಾಲದ ಕೆನರಾ ಬ್ಯಾಂಕ್‌ನ ವೃತ್ತಕಚೇರಿ ಬಳಿಯಿಂದ ಪ್ರಾರಂಭಗೊಳ್ಳಲಿದೆ. ಸಮಾರೋಪ ಸಮಾರಂಭ 8:30ರಿಂದ 9ರ ನಡುವೆ ನಡೆಯಲಿದೆ ಎಂದು ಸಚಿನ್ ಶೆಟ್ಟಿ ವಿವರಿಸಿದರು.
ಒಟ್ಟು ಐದು ಲಕ್ಷ ರೂ.ಬಹುಮಾನ ಮೊತ್ತ ಇರುವ ಈ ಮ್ಯಾರಥಾನ್ ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಿಂದ ಟ್ಯಾಪ್ಮಿ, ಪರ್ಕಳ, ಆತ್ರಾಡಿಯಿಂದ ಮತ್ತೆ ಮಣಿಪಾಲದವರೆಗೆ ನಡೆಯಲಿದೆ. ಇದರೊಂದಿಗೆ 8ರಿಂದ 10ವರ್ಷದೊಳಗಿನ ವಿದ್ಯಾರ್ಥಿಗಳಿಗೆ, ಮಾಹೆಯ ವಿದ್ಯಾರ್ಥಿಗಳಿಗೆ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಗೆ ಪ್ರತ್ಯೇಕವಾದ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲರೂ ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಆನ್‌ಲೈನ್ ಮೂಲಕ ಅಥವಾ ಕೆನರಾ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ನೊಂದಣಿ ಮಾಡಿಕೊಳ್ಳಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಪರ್ಧೆಯ ಸಂಯೋಜಕರಾದ ವಿಶಾಲ್ ಸಿಂಗ್,, ರೋಹಿತ್, ಸೂರಜ್ ಉಪ್ಪೂರು, ದುರ್ಗಾಪ್ರಸಾದ್ ಉಪಸ್ಥಿತರಿದ್ದರು.







