ಉಡುಪಿ: ಆ.10ಕ್ಕೆ ಟೈಲರ್ಸ್ ವೃತ್ತಿ ಬಾಂಧವರ ಬೃಹತ್ ಸಮಾವೇಶ

ಉಡುಪಿ, ಆ.7: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್‌ನ ಉಡುಪಿ ಜಿಲ್ಲಾ ಸಮಿತಿಯ ‘ರಜತ ಸಂಭ್ರಮ-25’, ಟೈಲರ್ಸ್ ವೃತ್ತಿ ಬಾಂಧವರ ಬೃಹತ್ ಸಮಾವೇಶ ಹಾಗೂ ಮಹಾಸಭೆ ಇದೇ ಆ.10 ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್‌ನ ರಾಜ್ಯ ಕೋಶಾಧಿಕಾರಿ ಕೆ. ರಾಮಚಂದ್ರ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಗುರುರಾಜ ಎಂ. ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9:30ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಸಮಾವೇಶವನ್ನು ಉದ್ಘಾಟಿಸುವರು. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯಾದ್ಯಂತ ಸುಮಾರು 10ಲಕ್ಷಕ್ಕೂ ಅಧಿಕ ಸ್ತ್ರೀ-ಪುರುಷರು ಟೈಲರ್ ವೃತ್ತಿಯನ್ನು ಅವಲಂಬಿಸಿದ್ದು, ‘ಭವಿಷ್ಯ ನಿಧಿ’ ಸೇರಿದಂತೆ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಕೆಲ ದಶಕಗಳಿಂದ ನಿರಂತರವಾಗಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮರು ಒತ್ತಾಯಿಸಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಟೈಲರ್ ವೃತ್ತಿ ಬಾಂಧವರಿಗೆ ‘ಭವಿಷ್ಯ ನಿಧಿ’ ಜಾರಿಗೊಳಿಸಬೇಕು. ಸರಕಾರ ಜವಳಿ ಉತ್ಪನ್ನಗಳಾದ ಬಟ್ಟೆಗಳು, ಸಿದ್ದ ಉಡುಪುಗಳು ಹಾಗೂ ಹೊಲಿಗೆ ಯಂತ್ರ, ದಾರ ಇನ್ನಿತರ ಟೈಲರ್ ಬಳಸುವ ಎಲ್ಲಾ ಕಚ್ಚಾ ವಸ್ತುಗಳ ಮೇಲೆ ಸೆಸ್ ವಿಧಿಸಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ರೀತಿಯಲ್ಲಿ ನಮ್ಮ ಸಂಘಟನೆಗೂ ಸವಲತ್ತುಗಳನ್ನು ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಟೈಲರ್ಸ್ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಮಾಸಾಶನ, ವೃದ್ಧಾಪ್ಯ ವೇತನ, ವಿಧವಾ ವೇತನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಷ್ಯವೇತನ ಉಚಿತ ಆರೋಗ್ಯ ಸೇವೆ, ಜೀವ ವಿಮೆ, ಆರೋಗ್ಯ ವಿಮೆ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಟೈಲರ್ಸ್ ಕ್ಷೇಮ ನಿಧಿ ಮಂಡಳಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ, ಜೊತೆ ಕಾರ್ಯದರ್ಶಿ ಸೌಮ್ಯ ಭಟ್ ಉಪಸ್ಥಿತರಿದ್ದರು.







