ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಒನ್‌ಗುಡ್ ಸ್ಟೆಪ್‌ನಿಂದ 10ನೇ ಲೇ-ಕೌನ್ಸೆಲರ್‌ಗೆ ಮಾನಸಿಕ ಆರೋಗ್ಯದ ತರಬೇತಿ ಕಾರ್ಯಾಗಾರ

ಉಡುಪಿ, ಸೆ.29: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರರ ಕೊರತೆಯ ಹಿನ್ನೆಲೆಯಲ್ಲಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಒನ್ ಗುಡ್ ಸ್ಟೆಪ್ ಇವರ ಜಂಟಿ ಆಶ್ರಯದಲ್ಲಿ 12 ವಾರಗಳ ಲೇ-ಕೌನ್ಸೆಲರ್ ತರಬೇತಿ ಕಾರ್ಯಾಗಾರವೊಂದನ್ನು ಅ.2ರಿಂದ ಪ್ರಾರಂಭಗೊಳ್ಳಲಿದೆ ಎಂದು ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಹಾಗೂ ನಾಡಿನ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಲೇ ಕೌನ್ಸಲರ್‌ಗಳು ವೃತ್ತಿಪರ ಮಾನಸಿಕ ಆರೋಗ್ಯ ತಜ್ಞರಿಗೆ ಪರ್ಯಾಯ ವಲ್ಲ. ಆದರೆ ಮಾನಸಿಕ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಸಮುದಾಯ ದೊಂದಿಗೆ ಸಂಪರ್ಕ ಸಾಧಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿ ಸಬಹುದು ಎಂದರು.
ಮಾನಸಿಕ ಆರೋಗ್ಯ ವಿಷಯದಲ್ಲಿ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಇವರು ತಕ್ಷಣದ ಭಾವನಾತ್ಮಕ ಬೆಂಬಲ ನೀಡಬಹುದು. ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ ಅಗತ್ಯವಿದ್ದರೆ ವೃತ್ತಿಪರ ಮನೋವೈದ್ಯರ ನೆರವು ಪಡೆಯಲು ಮಾರ್ಗದರ್ಶನ ನೀಡಬಹುದು ಎಂದರು.
ಲೌ ಕೌನ್ಸಲರ್ ತರಬೇತಿ ಕಾರ್ಯಗಾರಕ್ಕೆ ಯಾರೂ ಸಹ ಹೆಸರು ನೊಂದಾಯಿಸಬಹುದು. ತರಬೇತಿಗೆ ಸೇರಲು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಅಥವಾ ಮಾನಸಿಕ ಆರೋಗ್ಯ ಕ್ಷೇತ್ರದ ಪೂರ್ವಜ್ಞಾನದ ಅಗತ್ಯವಿಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ, ಆಸಕ್ತಿ ಇದ್ದರೆ ಸಾಕಾಗುತ್ತದೆ. ಶಿಕ್ಷಕರು, ನಿವೃತ್ತರು, ಬ್ಯಾಂಕರ್‌ಗಳು ಸೇರಿದಂತೆ ಆಸಕ್ತ ಯಾರೂ ಸಹ ಪ್ರತಿ ರವಿವಾರ (ಬೆಳಗ್ಗೆ 9:30ರಿಂದ ಅಪರಾಹ್ನ 1:30ರವರೆಗೆ) ನೀಡುವ 12ವಾರಗಳ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಅ.2ರಂದು ಕಾರ್ಯಾಗಾರದ ಉದ್ಘಾಟನೆ ನಡೆಯಲಿದ್ದು, ಬಳಿಕ ಸಿಟಿ ಬಸ್‌ನಿಲ್ದಾಣದ ಬಳಿಯ ಸದಾನಂದ ಟವರ್‌ನ ಮಾನಸ ಕ್ಲಿನಿಕ್‌ನಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಎಂದರು.
2023ರ ಅಕ್ಟೋಬರ್ 2ರಂದು ಖ್ಯಾತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್‌ರಿಂದ ಉದ್ಘಾಟನೆಗೊಂಡ ತರಬೇತಿಯ 10ನೇ ಕಾರ್ಯಾಗಾರ ಅ.2ರಿಂದ ಪ್ರಾರಂಭಗೊಳ್ಳಲಿದೆ. ಇದುವರೆಗೆ 200ಕ್ಕೂ ಅಧಿಕ ಮಂದಿ ಇದರಲ್ಲಿ ತರಬೇತಿ ಪಡೆದಿದ್ದಾರೆ. ತರಬೇತಿ ಅವಧಿಯಲ್ಲಿ ಸಕ್ರಿಯ ಆಲಿಸುವಿಕೆ, ಸಂವಹನ ಕೌಶಲ್ಯ, ಪೂರ್ವಗ್ರಹ ರಹಿತ ಸಂವಹನ, ಸಹಾನುಭೂತಿ ಹಾಗೂ ವ್ಯಕ್ತಿ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಕೌಶಲ್ಯಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.
ಜೊತೆಗೆ ಮೆದುಳಿನ ಕಾರ್ಯವೈಖರಿ, ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳು, ಅವುಗಳ ಲಕ್ಷಣ, ಚಿಕಿತ್ಸಾ ವಿಧಾನ, ಆತ್ಮಹತ್ಯೆ ಆಲೋಚನೆಗಳನ್ನು ಗುರುತಿಸುವುದು, ಅದನ್ನು ತಡೆಗಟ್ಟಲು ಸಹಾಯ ಮಾಡು ವುದು, ವೈವಾಹಿಕ ಹಾಗೂ ಆಪ್ತಸಮಾಲೋಚನೆಗೂ ತರಬೇತಿ ನೀಡಲಾಗುತ್ತದೆ ಎಂದು ಡಾ.ಪಿ.ವಿ.ಭಂಡಾರಿ ವಿವರಿಸಿದರು.
ಹೆಚ್ಚಿನ ಮಾಹಿತಿಗಳಿಗಾಗಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಕೆ. ಶೆಟ್ಟಿ ಅಥವಾ ಒನ್ ಗುಡ್ ಸ್ಟೆಪ್‌ನ ಅಮಿತಾ ಪೈ ಅವರನ್ನು ಸಂಪರ್ಕಿಸಬಹುದು. ಆಸಕ್ತರು 9538886291/ 9986411788 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದೂ ಡಾ.ಭಂಡಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ಮಾನಸ್, ನಾಗರಾಜ್‌ಮೂರ್ತಿ, ಸೌಜನ್ಯ ಶೆಟ್ಟಿ, ಅಲ್ಕಾ ಪೈ, ರಾಘವೇಂದ್ರ ರಾವ್ ಉಪಸ್ಥಿತರಿದ್ದರು.






