ಕಾಂಜರಕಟ್ಟೆಯ ಹೋಟೆಲ್ ಬೆಂಕಿಗಾಹುತಿ: 10 ಲಕ್ಷ ರೂ. ನಷ್ಟ

ಪಡುಬಿದ್ರಿ, ಅ.9: ಪಡುಬಿದ್ರಿ-ಕಾರ್ಕಳ ರಸ್ತೆಯ ಕಾಂಜರಕಟ್ಟೆಯಲ್ಲಿರುವ ಹೊಟೇಲೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ರಾಮದಾಸ್ ಸಹೋದರರು ನಡೆಸುತ್ತಿದ್ದ ಶ್ರೀಕೃಷ್ಣ ಹೋಟೆಲ್‌ನ್ನು ಗುರುವಾರ ರಾತ್ರಿ 8 ಗಂಟೆಗೆ ಬಂದ್ ಮಾಡಿ ಮನೆಗೆ ತೆರಳಿದ್ದರು. ಬಳಿಕ ಹೊಟೇಲ್ ಒಳಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಕೆನ್ನಾಲಿಗೆ ಹೊಟೇಲ್‌ಗೆ ಆವರಿಸಿತು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯ ರವೀಂದ್ರ ಸಾಲಿಯಾನ್ ಇತರರೊಂದಿಗೆ ಒಗ್ಗೂಡಿಸಿ ಬೆಂಕಿ ನಂದಿಸುವ ಪ್ರಯತ್ನಕ್ಕೆ ಮುಂದಾದರು.
ಸ್ಥಳಕ್ಕೆ ಆಗಮಿಸಿದ ಅದಾನಿ ಅಗ್ನಿಶಾಮಕ ದಳ ಹಾಗೂ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಗಣೇಶ್ ಶೆಟ್ಟಿ ಸಾಂತೂರು, ರವೀಂದ್ರ ಪ್ರಭು ಸಾಂತೂರು, ದೀಪಕ್ ಕಾಮತ್ ಸೇರಿದಂತೆ ಹಲವರು ಬೆಂಕಿ ನಂದಿಸುವ ಕಾರ್ಯದಲ್ಲಿ ಕೈಜೋಡಿಸಿದರು.
ಬೆಂಕಿಯ ತೀವ್ರತೆಗೆ ಹೋಟೆಲ್ ಸಂಪೂರ್ಣ ಸುಟ್ಟು ಹೋಗಿದ್ದು, ವಿವಿಧ ಪರಿಕರಗಳಿಗೆ ಅಪಾರ ಹಾನಿ ಉಂಟಾಗಿದೆ. ಇದರಿಂದ 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.




