ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ: 10ಕ್ಕೂ ಅಧಿಕ ಮನೆಗಳಿಗೆ ಹಾನಿ; 4ಲಕ್ಷ ಕ್ಕೂ ಅಧಿಕ ನಷ್ಟ

ಉಡುಪಿ, ಜು.4: ಜಿಲ್ಲೆಯಲ್ಲಿ ಭಾರೀ ಮಳೆ ದಿನವಿಡೀ ಮುಂದುವರಿದಿದೆ. ಸಂಜೆಯ ಬಳಿಕ ಮಳೆಯ ಅಬ್ಬರ ಹೆಚ್ಚಿದೆ. ಆಗಾಗ ಜೋರಾದ ಗಾಳಿಯೂ ಬೀಸುತಿದ್ದು, ನದಿಗಳೆಲ್ಲವೂ ತುಂಬಿ ಹರಿಯುತ್ತಿರುವುದರಿಂದ ಜಿಲ್ಲಾಡಳಿತ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಗಾಳಿಯಿಂದಾಗಿ ಜಿಲ್ಲೆಯ ವಿವಿದೆಡೆಗಳಲ್ಲಿ 10ಕ್ಕೂ ಅಧಿಕ ಮನೆಗಳಿಗೆ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿರುವ ವರದಿಗಳು ಬರುತ್ತಿವೆ.. ಇದರಿಂದ ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಹೆಬ್ರಿಯ ರಾಮಕೃಷ್ಣ ಓಕುಡ ಎಂಬವರ ಮನೆ ನಿನ್ನೆಯ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಕಾಪು ತಾಲೂಕು ಪಲಿಮಾರು ಗ್ರಾಮದ ಸುನಂದ ಭಂಡಾರಿ ಅವರ ಮನೆ ಮೇಲೆ ಮರ ಬಿದ್ದು 80ಸಾವಿರ ರೂ., ಫಾತುಮ್ಮ ಎಂಬವರ ಮನೆ ಭಾಗಶ: ಕುಸಿದು 80 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕು ನಂದಿಕೂರು ಗ್ರಾಮದ ಗುಣವತಿ ಎಂಬವರ ಮನೆಗೆ 60ಸಾವಿರ ರೂ., ಪಾದೂರು ಗ್ರಾಮದ ಉಷಾ ಹಾಗೂ ಬಡಾ ಗ್ರಾಮದ ಪ್ರಕಾಶ ಆಚಾರ್ಯರ ಮನೆಗೆ ತಲಾ 15 ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಚಿಕ್ಕು ದೇವಾಡಿಗರ ಮನೆ ಮೇಲೆ ಮರ ಬಿದ್ದು 25ಸಾವಿರ ರೂ., ಕೋಟೇಶ್ವರ ಗ್ರಾಮದ ಕೆ.ರಾಘವೇಂದ್ರ ಹೆಬ್ಬಾರ್ ಮನೆ ಮೇಲೆ ಮರ ಬಿದುದ 30ಸಾವಿರ ರೂ., ಹೆಬ್ರಿ ತಾಲೂಕು ಬೇಳಂಜೆ ಗ್ರಾಮದ ರಾಜು ಎಂಬವರ ಮನೆಗೆ 20,000 ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಕುಂದಾಪುರ ತಾಲೂಕು ಅಂಪಾರು ಗ್ರಾಮದ ಆನಂದ್ ಎಂಬವರ ಮನೆಯ ಅಡಿಕೆ ಬೆಳೆಗೆ ಅಪಾರ ಹಾನಿಯಾಗಿದೆ. ಗಾಳಿಗೆ ಮರಗಳು ಧರಾಶಾಹಿಯಾಗಿದ್ದು 20ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿ ರುವುದಾಗಿ ಅಂದಾಜಿಸಲಾಗಿದೆ.
ಉಡುಪಿ ಸೇರಿದಂತೆ ರಾಜ್ಯ ಕರಾವಳಿಯ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಇದೇ ರೀತಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೂ ಬೀಸುವ ಸಂಭವವಿದೆ.







