ಉಡುಪಿಯ ಸಹಕಾರಿ ಸಂಸ್ಥೆಗಳಿಂದ ಶೇ.100ರಷ್ಟು ಶಿಕ್ಷಣ ನಿಧಿ ಪಾವತಿ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ, ಆ.22: ಪ್ರಸಕ್ತ ವರ್ಷದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಇಡೀ ರಾಜ್ಯದಲ್ಲಿ ಶೇ.100ಕ್ಕೆ ನೂರರಷ್ಟು ಶಿಕ್ಷಣ ನಿಧಿ ಪಾವತಿಸಿದ ಹೆಗ್ಗಳಿಕೆ ಉಡುಪಿ ಜಿಲ್ಲೆಯ ಸಮಸ್ತ ಸಹಕಾರಿಗಳಿಗೆ ಸಲ್ಲುತ್ತದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಕಡಿಯಾಳಿಯ ದಿ ಓಷ್ಯನ್ ಪರ್ಲ್ ಸಭಾಂಗಣ ದಲ್ಲಿ ಶುಕ್ರವಾರ ಆಯೋಜಿಸಲಾದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸಹಕಾರ ಮಹಾಮಂಡಳದ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಶಿಕ್ಷಣ ತರಬೇತಿ ಈ ಕುರಿತು ನಿರಂತರ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಸಹಕಾರಿ ಕ್ಷೇತ್ರ ಎಂಬುವುದು ವಿಶ್ವಾಸ, ನಂಬಿಕೆಯೊಂದಿಗೆ ಕೆಲಸ ಮಾಡುವ ಸಂಸ್ಥೆ. ಜನರು ತಮ್ಮ ಆರ್ಥಿಕ ವ್ಯವಹಾರಗಳಿಗಾಗಿ ಸಹಕಾರಿ ಸಂಸ್ಥೆಗಳಲ್ಲಿ ಉಳಿತಾಯ ಠೇವಣಿ ಮಾಡುವುದರ ಮೂಲಕ ಸಹಕಾರ ನೀಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಹಕಾರಿ ಸಂಸ್ಥೆಗಳು ಜನರಿಗೆ ಸಾಲ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಸಹಕಾರಿ ಕಾಯ್ದೆಗಳಲ್ಲಿ ಆಗುವ ತಿದ್ದುಪಡಿಗಳ ಬಗ್ಗೆ ಗಮನ ಹರಿಸಬೇಕು ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಗಂಗಾಧರ್ ಶೆಟ್ಟಿ, ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಸಹಕಾರಿ ಯೂನಿಯನ್ ನಿರ್ದೇಶಕರಾದ ಶ್ರೀಧರ ಪಿಎಸ್., ಸುಧೀರ್ ವೈ, ಅನಿಲ್ ಎಸ್. ಪೂಜಾರಿ, ಪ್ರಸಾದ್ ಎಸ್.ಶೆಟ್ಟಿ, ಎನ್.ಮಂಜಯ್ಯ ಶೆಟ್ಟಿ, ಪ್ರದೀಪ್ ಯಡಿಯಾಳ, ಅರುಣ್ ಕುಮಾರ್ ಹೆಗ್ಡೆ, ಕರುಣಾಕರ ಶೆಟ್ಟಿ, ಸುರೇಶ್ ರಾವ್, ಗೋಪಿಕೃಷ್ಣ ರಾವ್, ಬಿಂದು ಬಿ.ನಾಯರಿ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ. ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಸಿಇಓ ವಿಶ್ವನಾಥ್ ನಾಯರಿ ‘ದುಡಿಯ ಲಾಗದ ಆಸ್ತಿ/ಅನುತ್ಪಾದಕ ಆಸ್ತಿ ನಗದು ಮೀಸಲು ಅನುಪಾತ ಹಾಗೂ ಶಾಸನಿಕ ದ್ರವ್ಯತ್ವ ಅನುಪಾತ’, ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕ ಎನ್.ಜೆ. ಗೋಪಾಲ್ ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಅಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳು’ ಕುರಿತು ಉಪನ್ಯಾಸ ನೀಡಿದರು.







