ವಿಶ್ವಕರ್ಮ ನಿಗಮದ ಅನುದಾನ 100 ಕೋಟಿ ರೂ.ಗೆ ಹೆಚ್ಚಿಸಿ: ಶ್ರೀಧರ ಆಚಾರ್ಯ

ಕುಂದಾಪುರ, ಸೆ.17: ದೇವಶಿಲ್ಪಿ ವಿಶ್ವಕರ್ಮ ವಿಶ್ವವನ್ನೇ ರಚನೆ ಮಾಡಿದ ಶಿಲ್ಪಿ. ದೇಶಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾದುದು. ವಿಶ್ವಕರ್ಮರ ಕೊಡುಗೆುಂದ ಧಾರ್ಮಿಕ ಕ್ಷೇತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೇಂದ್ರ ಸರಕಾರ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿ 35ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕುಶಲರ್ಕುಗಳು, ಬಡ ಕಾರ್ಮಿಕರು ಅವರ ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಉದ್ದೇಶದಿಂದ ಸಬ್ಸಿಡಿ ಸಾಲವನ್ನು ಬ್ಯಾಂಕ್ ಮೂಲಕ ನೀಡಲಾಗುತ್ತಿದೆ ಎಂದು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಹೇಳಿದ್ದಾರೆ.
ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಕುಂದಾಪುರ ಪ್ರಜಾಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯದ ವಿಶ್ವಕರ್ಮ ನಿಗಮದಲ್ಲಿ 10 ಕೋಟಿ ರೂ. ಅನುದಾನ ಮೀಸಲಾಗಿರಿಸಿದ್ದು, ಅದನ್ನು 100 ಕೋಟಿ ರೂ. ಗೆ ಹೆಚ್ಚಿಸಬೇಕು. ಸಮಾಜದಲ್ಲಿರುವ ವಯೋವೃದ್ಧರಿಗೆ ಸರಕಾರದಿಂದ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ವಿಶ್ವಕರ್ಮ ಜಯಂತಿಯನ್ನು ವ್ಯವಸ್ಥಿತವಾಗಿ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ತಾಲೂಕು ಆಡಳಿತ ನೀಡಬೇಕು ಎಂದರು.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೋ ಶುಭ ಹಾರೈಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ದೈಹಿಕ ಶಿಕ್ಷಣ ಪರೀವಿಕ್ಷಕ ಸತ್ಯನಾರಾಯಣ, ಉಪ ತಹಶೀಲ್ದಾರ್‌ರಾದ ಪ್ರಕಾಶ ಪೂಜಾರಿ, ಚಂದ್ರಶೇಖರ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪತಹಶೀಲ್ದಾರ್ ವಿನಯ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಸಿದರು.







