"ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 10,000 ರೂ.ಪಿಂಚಣಿ ಸಿಗಲಿ"

ಉಡುಪಿ, ಜು.26: ಉಡುಪಿ ಜಿಲ್ಲೆಯಲ್ಲಿ ಇಂದು 500ಕ್ಕೂ ಅಧಿಕ ಕಟ್ಟಡ ಪಿಂಚಣಿದಾರರು ಇದ್ದು, ಅವರಿಗೆ ಇಂದಿನ ಬೆಲೆ ಏರಿಕೆ ಆಧಾರದಲ್ಲಿ ಕನಿಷ್ಟ ತಿಂಗಳಿಗೆ 10 ಸಾವಿರ ರೂ. ಪಿಂಚಣಿ ಸಿಗುವಂತಾಗಬೇಕು ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ಗೊಲ್ಲ ಆಗ್ರಹಿಸಿದ್ದಾರೆ.
ನಗರದ ಲಿಕೋ ಬ್ಯಾಂಕ್ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಪಿಂಚಣಿದಾರರ ಉಡುಪಿ ಜಿಲ್ಲಾ ಮಟ್ಟದ 2ನೇ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ಸಾವಿರಾರು ಮಂದಿ ನಿವೃತ್ತ ಪಿಂಚಣಿದಾರರು ಇದ್ದಾರೆ. ರಾಜ್ಯದ ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ಹಣ ಇದೆ. ಈ ಹಣ ದುರುಪಯೋಗ ಆಗದೆ ಕಟ್ಟಡ ಕಾರ್ಮಿಕರಿಗೆ ಸಮರ್ಪಕವಾಗಿ ವಿತರಣೆ ಆಗುವಂತಾ ಗಬೇಕು. ಎಲ್ಲಾ ಪಿಂಚಣಿದಾರರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚವನ್ನು ಭರಿಸಬೇಕು. ಮತ್ತು ಕಾರ್ಮಿಕ ಮರಣ ಹೊಂದಿದಲ್ಲಿ ಅಂತ್ಯಸಂಸ್ಕಾರದ ವೆಚ್ಚ ನೀಡಬೇಕು ಎಂದು ಒತ್ತಾಯಿಸಿದರು.
ಸಮಾವೇಶದಲ್ಲಿ ಉಡುಪಿ ಜಿಲ್ಲಾ ಪಿಂಚಣಿದಾರರ ಸಂಘದ ಸಂಚಾಲಕರಾದ ರಾಮ ಕಾರ್ಕಡ, ಸಹ ಸಂಚಾಲಕ ರಾದ ರಾಮ ಸಾಲ್ಯಾನ್ ಕಾಪು, ಸದಸ್ಯರಾದ ಗಣೇಶ್ ನಾಯಕ್, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುಭಾಷ್ ನಾಯಕ್, ಉಪಾಧ್ಯಕ್ಷರಾದ ದಯಾನಂದ ಕೊಟ್ಯಾನ್, ಸೈಯದ್ ಅಲಿ, ಕೋಶಾಧಿಕಾರಿ ವಾಮನ ಪೂಜಾರಿ, ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್ ಉಪಸ್ಥಿತರಿದ್ದರು.






