ಯಕ್ಷಗಾನ ಕಲಾರಂಗದ 101ನೆಯ ಮನೆ ಹಸ್ತಾಂತರ

ಉಡುಪಿ, ಆ.6: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಮೂಲ್ಯ ಖಾರ್ವಿಯ ಬಡ ಕುಟುಂಬಕ್ಕೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ, ದಾನಿಗಳಾದ ಮಂಗಳೂರಿನ ಪಿ. ಗೋಕುಲನಾಥ ಪ್ರಭು ಅವರು ತಮ್ಮ ಸಹಪಾಠಿ ನಂದನ ಕಾಮತ್ ಸಂಸ್ಮರಣೆಯಲ್ಲಿ ನಿರ್ಮಿಸಿ ಕೊಟ್ಟ ನೂತನ ಮನೆ ‘ನಂದನ’ದ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಜ್ಯೋತಿ ಬೆಳಗಿಸಿ ಮನೆಯನ್ನು ಉದ್ಘಾಟಿಸಿದ ಗೋಕುಲನಾಥ ಪ್ರಭು ಅವರು ಅಮೂಲ್ಯ ಖಾರ್ವಿ ಹಾಗೂ ಅವರ ಹೆತ್ತವರಾದ ಮೋಹನ್ ಖಾರ್ವಿ ಹಾಗೂ ಆಶಾ ಅವರಿಗೆ ಮನೆಯನ್ನು ಹಸ್ತಾಂತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಯಕ್ಷಗಾನ ಕಲಾರಂಗ ಯಾವ ಬಾಹ್ಯ ಪ್ರಭಾವ, ಮುಲಾಜಿಗೂ ಒಳಗಾಗದೆ ವಿದ್ಯಾರ್ಥಿಗಳ ಆಯ್ಕೆ ಮಾಡುತ್ತದೆ. ಈ ಮೂಲಕ ಬಡಕುಟುಂಬ ವೊಂದು ಸುಮಾರು ಏಳು ಲಕ್ಷ ರೂ.ವೆಚ್ಚದ ಸುಂದರ, ಸರಳ ಮನೆಯನ್ನು ಹೊಂದುತ್ತದೆ ಎಂದರು.
ನಿವೃತ್ತ ಪ್ರಾಚಾರ್ಯ ನಾರಾಯಣ ಜೋಯಿಸರು ಯಕ್ಷಗಾನ ಕಲಾರಂಗದ ಕಾರ್ಯಕ್ರಮಕ್ಕೆ ಸಂತಸ ವ್ಯಕ್ತಪಡಿಸಿ, ಈ ಕೊಡುಗೆಗೆ ಕಲಿಕೆಯಲ್ಲಿ ಪ್ರಗತಿ ಸಾಧಿಸುವ ಹೊಣೆಗಾರಿಕೆ ನಿನ್ನ ಮೇಲಿದೆ ಎಂದು ಅಮೂಲ್ಯಾಳಿಗೆ ಕಿವಿಮಾತು ಹೇಳಿದರು.
ಅತಿಥಿಗಳಾಗಿ ಮಂಗಳೂರಿನ ಖ್ಯಾತ ವೈದ್ಯ ಡಾ.ಜೆ.ಎನ್.ಭಟ್, ನಂದನ ಕಾಮತರ ಪುತ್ರಿ ಲಕ್ಷೀ ಕಾಮತ್, ನಿವೇದಿತಾ ಜಿ. ಪ್ರಭು, ಶೋಭಾ ನಂದನ ಕಾಮತ್, ಗುರುದತ್, ಜನಾರ್ದನ ಭಟ್, ರೇಷ್ಮಾ ಭಟ್, ಶ್ವೇತಾ ಕಾಮತ್, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಅನಂತರಾಜ ಉಪಾಧ್ಯ, ವಿಷ್ಣುಮೂರ್ತಿ ಭಟ್, ಮರ್ಣೆ ಉಮೇಶ ಭಟ್, ಜಯರಾಮ ಪಡಿಯಾರ್, ಆರ್. ವಸಂತ ಭಾಗವಹಿಸಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.






