ಮಣಿಪಾಲ: ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ 10.83 ಲಕ್ಷ ರೂ. ವಂಚನೆ

ಮಣಿಪಾಲ, ಮೇ 25: ಹಣ ಹೂಡಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲದ ಹಾಸ್ಟೆಲ್ ರೂಮ್‌ನಲ್ಲಿರುವ ವಂಶದೀಪ (23) ಎಂಬವರ ವಾಟ್ಸಾಪ್‌ಗೆ ಮೇ 12ರಂದು ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ಕುರಿತು ಲಿಂಕ್ ವೊಂದನ್ನು ಬಂದಿದ್ದು, ಅದರಂತೆ ಅವರು ಟೆಲಿಗ್ರಾಮ್ ಆಫ್ ನಲ್ಲಿರುವ ಗ್ರೂಪ್‌ಗೆ ಸೇರ್ಪಡೆ ಗೊಂಡಿದ್ದರು. ಬಳಿಕ ಅಪರಿಚಿತ ವ್ಯಕ್ತಿಯು ವಿವಿಧ ರೀತಿಯ ಟಾಸ್ಕ್‌ಗಳನ್ನು ನೀಡಿ ಅದನ್ನು ಪುರ್ಣಗೊಳಿಸಿದರೇ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವುದಾಗಿ ನಂಬಿಸಿದ್ದನು.
ಅದರಂತೆ ವಂಶದೀಪ ವಿವಿಧ ರೀತಿಯ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ ನಂತರ 7,860ರೂ. ಹಣವು ಅವರ ಬೇರೆ ಬೇರೆ ಕಂತುಗಳಲ್ಲಿ ಖಾತೆಗೆ ಜಮಾ ಆಗಿತ್ತು. ನಂತರ ಅಪರಿಚಿತ ವ್ಯಕ್ತಿಯು ಇನ್ನು ಹೆಚ್ಚು ಲಾಭ ಪಡೆಯಲು ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದರು. ಅದರಂತೆ ವಂಶದೀಪ 10,83,625ರೂ. ಹಣವನ್ನು ಹೂಡಿಕೆ ಮಾಡಿದರು. ಆದರೆ ಅಪರಿಚಿತ ವ್ಯಕ್ತಿಯು ನಂಬಿಸಿ ಮೋಸ ಮಾಡಿ ಆ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.





