ಉಡುಪಿ ಜಿಲ್ಲಾ ಬಿಜೆಪಿಯಿಂದ ಮೋದಿ ಸರಕಾರಕ್ಕೆ 11 ವರ್ಷಾಚರಣೆ ಕಾರ್ಯಾಗಾರ

ಉಡುಪಿ, ಜೂ.10: ಜವಾಹರ್‌ಲಾಲ್ ನೆಹರು ನಂತರ ಸುಧೀರ್ಘ ಕಾಲ ದೇಶವನ್ನಾಳಿದ ಪ್ರಧಾನಿ ಎನಿಸಿದ ನರೇಂದ್ರ ಮೋದಿ, ದೇಶದ ಅಭಿವೃದ್ಧಿಗೆ ಬದ್ಧತೆಯನ್ನು ಹೊಂದಿರುವುದಕ್ಕೆ ಅವರ ನೇತೃತ್ವದಲ್ಲಿ ಬಿಜೆಪಿಯ 11 ವರ್ಷಗಳ ಆಡಳಿತವೇ ಸಾಕ್ಷಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.
ಮೋದಿ ಸರಕಾರಕ್ಕೆ 11 ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕೇವಲ ರಾಜಕಾರಣ, ಅಧಿಕಾರ ಅನುಭವಿಸಲು ಸೀಮಿತವಾಗದ ಮೋದಿ ದೇಶದ ಅಭಿವೃದ್ಧಿಗೆ ಬದ್ಧತೆ ಹೊಂದಿರುವುದು, ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಆಶ್ವಾಸನೆಗಳನ್ನೆಲ್ಲಾ ಈಡೇರಿಸಿದ ದಿಟ್ಟ ಆಡಳಿತಕ್ಕೆ ಅವರು ನಿರಂತರ ವಾಗಿ 11 ವರ್ಷ ಪೂರ್ಣಗೊಳಿಸಿರುವುದೇ ಸಾಕ್ಷಿ ಎಂದ ಅವರು, 2014ರಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿ ಹುದ್ದೆಗೇರಿದಾಗ ದೇಶದ ಕೇವಲ 7 ರಾಜ್ಯಗಳಲ್ಲಿ ಆಡಳಿತ ನಡೆಸುತಿದ್ದ ಬಿಜೆಪಿ, ಇದೀಗ 21 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವುದೇ ಮೋದಿ ಅವರ ಯಶಸ್ಸಿಗೆ ಕೈಗನ್ನಡಿ ಎಂದರು.
ಅಭಿವೃದ್ಧಿ ಜತೆಗೆ ಪಕ್ಷ ಸಂಘಟನೆ ಮುಖ್ಯ ಎಂಬುದನ್ನು ನರೇಂದ್ರ ಮೋದಿ ಹಾಗೂ ಬಿಜೆಪಿ ಈ ಮೂಲಕ ತೋರಿಸಿಕೊಟ್ಟಿದೆ. ನೆಹರೂ ಬಳಿಕ ನಿರಂತರ ಮೂರು ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅಭಿವೃದ್ಧಿಯ ಹರಿಕಾರರಾಗಿದ್ದು ನುಡಿದಂತೆ ನಡೆದಿದ್ದಾರೆ. ದಿನಕ್ಕೆ 38 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಭಾರತ ಜಗತ್ತಿನ ನಾಲ್ಕನೇ ಅತೀ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಮೂಡಿ ಬಂದಿರುವುದು ಮೋದಿ ಹೆಗ್ಗಳಿಕೆ. ಭಾರತ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಏರಬೇಕೆನ್ನುವುದು ಬಿಜೆಪಿ ಕಾರ್ಯಕರ್ತರು ಮತ್ತು ದೇಶವಾಸಿಗಳ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುರ್ಮಾ ಶೆಟ್ಟಿ, ಕಾರ್ಯಾಗಾರದ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ಮೋದಿ ಸರ್ಕಾರಕ್ಕೆ 11 ವರ್ಷ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಡೆಯಲಿರುವ ವಿವಿಧ ಅಭಿಯಾನಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕ ನಾರಾಯಣ ಮೂರ್ತಿ ಅವರಿಗೆ ಸಿಹಿ ತಿನ್ನಿಸಿ ಪ್ರಧಾನಿ ಮೋದಿ ಆಡಳಿತದ 11 ವರ್ಷವನ್ನು ಸಂಭ್ರಮಿಸಲಾಯಿತು.
ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಹಾವೀರ ಹೆಗ್ಡೆ ಸಹಿತ ಪಕ್ಷದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ವಿವಿಧ ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ದಿಲೇಶ್ ಶೆಟ್ಟಿ ವಂದಿಸಿದರು.