ಉಡುಪಿ-ಮಣಿಪಾಲದಲ್ಲಿ ರಾತ್ರಿ 11ಗಂಟೆವರೆಗೆ ಹೊಟೇಲ್, ಅಂಗಡಿ ಓಪನ್

ಉಡುಪಿ, ಆ.29: ಆರ್ಥಿಕತೆ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಉಡುಪಿ ಹಾಗೂ ಮಣಿಪಾಲದಲ್ಲಿ ಹೊಟೇಲ್, ಅಂಗಡಿಗಳು ರಾತ್ರಿ 11 ಗಂಟೆಯವರೆಗೆ ತೆರೆದಿಡಲು ಅವಕಾಶ ಕಲ್ಪಿಸುವ ಕುರಿತು ಶುಕ್ರವಾರ ನಡೆದ ಉಡುಪಿ ನಗರಸಭೆಯ ಸಾಮಾನ್ಯಸಭೆಯಲ್ಲಿ ನಿರ್ಣಯ ತೆಗೆದು ಕೊಳ್ಳಲಾಯಿತು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪ್ರಸ್ತುತ ಉಡುಪಿ, ಮಣಿಪಾಲದಲ್ಲಿ ರಾತ್ರಿ 10ಗಂಟೆಗೆ ಅಂಗಡಿ, ಹೊಟೇಲ್‌ಗಳನ್ನು ಬಂದ್ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ. ಅದೇ ರೀತಿ ಪ್ರವಾಸಿಗರು, ರೋಗಿಯ ಸಂಬಂಧಿಕರು, ವಿದಾರ್ಥಿಗಳಿಗೆ ರಾತ್ರಿ ಊಟ ಹಾಗೂ ವಸ್ತುಗಳನ್ನು ಕೊಂಡು ಕೊಳ್ಳಲು ತುಂಬಾ ತೊಂದರೆ ಆಗುತ್ತಿದೆ ಎಂದರು.
ಆದುದರಿಂದ ಜಿಲ್ಲೆಯ ಆರ್ಥಿಕ ಹಿತದೃಷ್ಠಿಯಿಂದ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಉಡುಪಿ ಹಾಗೂ ಮಣಿಪಾಲದಲ್ಲಿ ರಾತ್ರಿ 11ಗಂಟೆಯವರೆಗೆ ಅಂಗಡಿ, ಹೊಟೇಲ್‌ಗಳನ್ನು ತೆರೆದಿಡುವಂತೆ ನಿರ್ಣಯ ಮಾಡಬೇಕು ಮತ್ತು ಅದನ್ನು ಜಿಲ್ಲಾಧಿಕಾರಿಗೆ ಸಲ್ಲಿಕೆ ಮಾಡಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು. ಅದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಬೀದಿ ನಾಯಿಗಳ ಕಾಟ: ಸದಸ್ಯೆ ಸಮಿತ್ರಾ ಆರ್.ನಾಯಕ್ ಮಾತನಾಡಿ, ನಗರದಲ್ಲಿ ಬೀದಿ ನಾಯಿ ಗಳ ಕಾಟ ವಿಪರೀತವಾಗಿದ್ದು, ಇದರಿಂದ ದ್ವಿಚಕ್ರ ವಾಹನ ಸವಾರರು, ಮಕ್ಕಳು, ಮಹಿಳೆಯರು ಭೀತಿ ಪಡುವಂತಾಗಿದೆ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೃಷ್ಣರಾಜ್ ಕೊಡಂಚ, ಬೀದಿನಾಯಿಗಳಿಗೆ ಅನ್ನ ಹಾಕಲು ಪ್ರತ್ಯೇತ ಸ್ಥಳ ಗುರುತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ನಗರಸಭೆ ಅಧಿಕಾರಿಗಳು ಇನ್ನೂ ಆ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಪರಿಸರ ಇಂಜಿನಿಯರ್ ರವಿ ಪ್ರಕಾಶ್, ನಾಯಿಗಳ ಸಂತಾನ ಹರಣ ಕೇಂದ್ರವನ್ನು ಸ್ಥಾಪಿಸಲು ಒಂದು ಎಕರೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಇಲ್ಲಿ ದಿನಕ್ಕೆ 20 ನಾಯಿಗಳ ಸಂತಾನ ಹರಣ ಮಾಡಲಾ ಗುತ್ತದೆ. ಇದಕ್ಕೆ ಸುಮಾರು 1.5ಕೋಟಿ ರೂ. ವೆಚ್ಚವಾಗಲಿದೆ. ನಾಯಿಗಳಿಗೆ ಅನ್ನ ಹಾಕುವ ಸ್ಥಳವನ್ನು ನಗರಸಭೆಯ ಎಲ್ಲ 35 ವಾರ್ಡ್‌ಗಳಲ್ಲಿಯೂ ಗುರುತಿಸುವ ಕಾರ್ಯ ಮಾಡಲಾಗುವುದು ಎಂದರು.
ಅಂಗಡಿ ಕೋಣೆ ಹರಾಜು: ನಗರಸಭೆಗೆ ಸಂಬಂಧಿಸಿದ ಅಂಗಡಿ ಕೋಣೆಗಳನ್ನು ಕಳೆದ 9 ತಿಂಗಳುಗಳಿಂದ ಹರಾಜು ಹಾಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರಸಭೆಯ ಆದಾಯಕ್ಕೆ ತೊಂದರೆ ಆಗುತ್ತಿದೆ ಎಂದು ಸದಸ್ಯ ಬಿ.ಜಿ.ಹೆಗ್ಡೆ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಉಡುಪಿ ನಗರ, ಮಲ್ಪೆ, ಸಂತೆಕಟ್ಟೆ ಹಾಗೂ ಗೋಪಾಲಪುರದಲ್ಲಿರುವ ಸುಮಾರು 15 ಅಂಗಡಿ ಕೋಣೆಗಳನ್ನು ಜಿಲ್ಲಾಧಿಕಾರಿ ಮಂಜೂರಾತಿ ನೀಡಿದಂತೆ ಹರಾಜು ಹಾಕಲಾಗಿದೆ. ಆದರೆ ಬಾಡಿಗೆ ಕರಾರು ನೋಂದಾಣಿ ಮತ್ತು ಡಿಸಿ ಇ ಖಾತೆಗೆ ಅನುಮೋದನೆ ನೀಡಬೇಕಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿ ಗಳು ವರ್ಗಾವಣೆಯಾಗಿರುವು ದರಿಂದ ಈ ಕಾರ್ಯ ವಿಳಂಬವಾಗಿದೆ. ಈ ವಾರದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಮಾತನಾಡಿ, ನಗರದ ಸಿಟಿ ಬಸ್ ನಿಲ್ದಾಣದಲ್ಲಿ ದಾರಿ ದೀಪಗಳಿಲ್ಲದೆ ಮಂಗಳ ಮುಖಿಯರು ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಅಗತ್ಯವಾಗಿ ಹೈಮಾಸ್ಟ್ ದೀಪ ಅಳವಡಿಸಬೇಕು ಎಂದರು. ಇದಕ್ಕೆ ಅಧ್ಯಕ್ಷರು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಪರೀತ ಮಳೆಯಿಂದಾಗಿ ಪರ್ಕಳ ರಾಷ್ಟ್ರೀಯ ಹೆದ್ದಾರಿ ಮತ್ತೆ ಹೊಂಡ ಗುಂಡಿಗಳಿಂದ ತುಂಬಿ ಹೋಗಿವೆ. ಆದುದರಿಂದ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು ಎಂದು ಸದಸ್ಯೆ ಸುಮಿತ್ರಾ ಆರ್.ನಾಯಕ್ ಆಗ್ರಹಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪ್ರಭಾರ ಪೌರಾಯುಕ್ತ ದುರ್ಗಾಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಜೆ. ಕಲ್ಮಾಡಿ ಉಪಸ್ಥಿತರಿದ್ದರು.
ಮಲ್ಪೆಯಲ್ಲಿ ಸ್ಥಳೀಯರಿಗೆ ಉಚಿತ ಪಾರ್ಕಿಂಗ್!
ಮಲ್ಪೆ ಬೀಚ್‌ನ ಆದಾಯ ಪ್ರವಾಸೋದ್ಯಮ ಇಲಾಖೆಗೆ ಸಂದಾಯ ಆಗುತ್ತಿರುವುದರಿಂದ ಉಡುಪಿ ಜನತೆಗೆ ಯಾವುದೇ ಪ್ರಯೋಜನ ಇಲ್ಲ ವಾಗಿದೆ. ಆದುದರಿಂದ ಮಲ್ಪೆ ಬೀಚ್‌ನಲ್ಲಿ ಉಡುಪಿಯವರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ನಿರ್ಣಯವನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾಡಲಾಯಿತು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಲ್ಪೆ ಬೀಚ್‌ನಲ್ಲಿನ ಅಂಗಡಿಗಳ ಆದಾಯ ನಗರಸಭೆಗೆ ಬರುತ್ತಿಲ್ಲ. ಆದರೆ ಅಲ್ಲಿನ ಕಸ ವಿಲೇವಾರಿ ಜವಾಬ್ದಾರಿಯನ್ನು ನಗರಸಭೆ ವಹಿಸಿಕೊಳ್ಳಬೇಕೆಂಬುದು ಸರಿಯಲ್ಲ. ಬೀಚ್‌ನ ಆದಾಯದಿಂದ ಉಡುಪಿಗೆ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆದುದರಿಂದ ಬೀಚ್‌ಗೆ ಬರುವ ಉಡುಪಿಯ ವರಿಗೆ ಶುಲ್ಕ ಪಡೆದುಕೊಳ್ಳದೇ ಉಚಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ದಾರಿ ದೀಪ ಹಾಗೂ ಕ್ಲೀನಿಂಗ್‌ನ ಜವಾಬ್ದಾರಿಯನ್ನು ಇಲಾಖೆಯೇ ತೆಗೆದುಕೊಳ್ಳಬೇಕು ಮತ್ತು ಬೋರ್ಡ್ ಕೂಡ ಹಾಕಬೇಕು. ನಗರಸಭೆಯಿಂದ ದಾರಿದೀಪ ನಿರ್ವಹಣೆ, ಕ್ಲೀನಿಂಗ್ ಮಾಡಬೇಕೆದರೆ ಅದರ ಹಣವನ್ನು ಪಾವತಿಸಬೇಕು. ಈ ಕುರಿತು ನಿರ್ಣಯ ಮಾಡಬೇಕು ಎಂದರು.







