ಮಣಿಪಾಲ: ಮಾ.11ರಿಂದ ಅಖಿಲ ಭಾರತ ಅಂತರ ವಿವಿ ಚೆಸ್

ಮಣಿಪಾಲ, ಮಾ.9: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ಪುರುಷರ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಚೆಸ್ ಚಾಂಪಿಯನ್‌ಷಿಪ್ ಮಾ.11ರಿಂದ 13ರವರೆಗೆ ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆಯಲಿದೆ.
ಭಾರತೀಯ ವಿವಿಗಳ ಸಂಘದ (ಎಐಯು) ಸಹಯೋಗದಲ್ಲಿ ಮಾಹೆ ನಾಲ್ಕು ದಿನಗಳ ಚಾಂಪಿಯನ್‌ಷಿಪ್‌ನ್ನು ಆಯೋಜಿಸುತ್ತಿದೆ. ಚಾಂಪಿಯನ್ ಷಿಪ್‌ನ ಉದ್ಘಾಟನಾ ಸಮಾರಂಭ ಮಾ.11ರ ಬುಧವಾರ ಬೆಳಗ್ಗೆ 9:30ಕ್ಕೆ ಡಾ.ಟಿಎಂಎ ಪೈ ಸಭಾಂಗಣದ ಮೂರನೇ ಮಹಡಿಯಲ್ಲಿ ನಡೆಯಲಿದೆ.
ಹೊಸದಿಲ್ಲಿಯ ಎಐಯುನ ಹೆಚ್ಚುವರಿ ಕಾರ್ಯದರ್ಶಿ ಮಮತಾ ಆರ್. ಅಗರ್ವಾಲ್ ಅವರು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಮಾಹೆಯ ಪ್ರೊವೈಸ್ ಚಾನ್ಸಲರ್ (ಆರೋಗ್ಯ ವಿಜ್ಞಾನ)ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ದೇಶಾದ್ಯಂತದಿಂದ ಬರುವ ವಿವಿಧ ವಿಶ್ವವಿದ್ಯಾಲಯಗಳ ಚೆಸ್ ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ. ದೇಶದ ಕೆಲವು ಪ್ರಮುಖ ಚೆಸ್ ಆಟಗಾರರು ಇದರಲ್ಲಿ ಸೇರಿದ್ದಾರೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.





