ಕಾರ್ಕಳ: ಮೇ 11ರಂದು ಕೆ.ಎಂ.ಇ.ಎಸ್. ವಿದ್ಯಾಸಂಸ್ಥೆಯ ನವೀಕೃತ ಕೊಠಡಿಗಳ ಲೋಕಾರ್ಪಣೆ

ಕಾರ್ಕಳ: ಗ್ರಾಮೀಣ ಪ್ರದೇಶವಾಗಿದ್ದ ಕುಕ್ಕುಂದೂರು ಪರಿಸರದಲ್ಲಿ ನಾಲ್ಕು ದಶಕಗಳ ಹಿಂದೆ ಗ್ರಾಮೀಣ ಯುವ ಜನತೆಯನ್ನು ಮುಖ್ಯವಾಹಿನಿಗೆ ತರಬೇಕೆಂಬ ಮಹಾದಾಸೆಯಿಂದ ಕೆ.ಎಂ.ಇ.ಎಸ್. ವಿದ್ಯಾಸಂಸ್ಥೆಗಳು ಜನ್ಮ ತಾಳಿದ್ದು, ಇದೀಗ ಇಲ್ಲಿನ ಕಾಲೇಜಿನ ನವೀಕೃತ ಹಾಗೂ ನವೀನ ಕೊಠಡಿಗಳ ಸಮುಚ್ಚಯದ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಇದರ ಉದ್ಘಾಟನಾ ಸಮಾರಂಭವು ಮೇ 11ರಂದು ಬೆಳಿಗ್ಗೆ 10.30ಕ್ಕೆ ಜರಗಲಿದ್ದು, ಅಧ್ಯಕ್ಷತೆಯನ್ನು ಕೆ.ಎಸ್.ಮುಹಮ್ಮದ್ ಮಸೂದ್ ವಹಿಸಲಿರುವರು. ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ನೆರವೇರಿಸಲಿದ್ದಾರೆ. ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಸಮುಚ್ಚಯದ ಲೋಕಾರ್ಪಣೆಗೈಯಲಿರುವರು.
ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಕೆ.ಎಸ್. ನಿಸಾರ್ ಅಹಮದ್ ಮತ್ತು ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅತಿಥಿಗಳಾಗಿ ರುವರು. ಕಾರ್ಕಳ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ.ಕೀರ್ತಿನಾಥ್ ಬಲ್ಲಾಳ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಕುಕ್ಕುಂದೂರು ಗ್ರಾಪಂ ಅಧ್ಯಕ್ಷೆ ಉಷಾ ಕೆ. ಮತ್ತು ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಮಿಸ್ ಕರ್ನಾಟಕ ಸ್ಟೈಲ್ ಐಕಾನ್ ವಿಜೇತೆ ಕುಮಾರಿ ಅಪೇಕ್ಷಾ ವಿ.ಹೆಗ್ಡೆ ಭಾಗವಹಿಸಲಿರುವರು.
42 ವರ್ಷಗಳ ಸಾರ್ಥಕ ಸೇವೆಯ ಹಾಗೂ ಜ್ಞಾನ ಪ್ರಸರಣದ ಹೆಗ್ಗುರುತಾಗಿ ಸಮಾಜದ ಮೂರು ಧಾರ್ಮಿಕ ಮುಖಂಡರಾದ ಶ್ರೀಕ್ಷೇತ್ರ ಕೇಮಾರು ಸಂದೀಪನಿ ಸಾಧನಾಶ್ರಮದ ಶ್ರೀಈಶವಿಠಲ ದಾಸ ಸ್ವಾಮೀಜಿ, ಅತ್ತೂರು ಅಲ್ ಹಲ್ವಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಹಫೀಝ್ ಮತ್ತು ಅತ್ತೂರಿನ ರೆವೆರೆಂಟ್ ಫಾದರ್ ವಲ್ಲೇಶ್ ಪ್ರಜ್ವಲ್ ಅರ್ಹಾನ ಆಶೀರ್ವಚನ ಗೈಯಲಿರುವರು.
ಇದೇ ಸಂದರ್ಭ ಕಾಲೇಜಿನ ಹಿರಿಯ ಸಾಧಕರಿಗೆ, ಮಾಜಿ ಪ್ರಾಂಶುಪಾಲರಿಗೆ ಹಾಗೂ ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್.ಇಮ್ಮಿಯಾಜ್ ಅಹಮದ್, ಪ್ರಭಾರ ಪ್ರಾಂಶುಪಾಲೆ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಾಟ್ಕರ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೊಲಿಟಾ ಝೀನಾ ಡಿಸಿಲ್ವಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಂಗ್ಲ ಮಾಧ್ಯಮ ಶಿಕ್ಷಣದಿಂದ ಯುವಜನತೆ ವಂಚಿತರಾಗಬಾರದು ಮತ್ತು ಔದ್ಯೋಗಿಕವಾಗಿ ಸರಿಸಮಾನ ಅವಕಾಶಗಳು ಅವರಿಗೂ ಲಭಿಸಬೇಕು ಎಂಬ ಧ್ಯೇಯದೊಂದಿಗೆ ಸ್ಥಾಪಿಸಲಾದ ಈ ವಿದ್ಯಾಸಂಸ್ಥೆ ಹಿರಿಯರಾದ ಹಾಜಿ ಪಿ.ಎಂ.ಖಾನ್, ಕೆ.ಎಸ್.ನಜೀರ್ ಅಹಮದ್ ಮತ್ತು ಹಾಜಿ ಎ.ಎಸ್. ರಶೀದ್ ಹೈದರ್ ಈ ತ್ರಿಮೂರ್ತಿಗಳ ತ್ರಿಕರ್ಣ ಪೂರ್ವಕ ಸೇವಾ ಕೈಂಕರ್ಯದ ಕನಸಿನ ಕೂಸು.
ಹಿರಿಯರಾದ ಕೆ.ಎಸ್.ಮುಹಮ್ಮದ್ ಮಸೂದ್ ಅವರ ನಿರಂತರ ಮಾರ್ಗದರ್ಶನ, ಕೆ.ಎಸ್.ನಿಸಾರ್ ಅಹಮದ್ ಅವರ ನಿಸ್ವಾರ್ಥ ಸೇವೆಯಿಂದ, ಪೋಷಕ ಬಂಧುಗಳ ಪೂರ್ಣ ಸಹಕಾರದಿಂದ ಈ ವಿದ್ಯಾ ಸಂಸ್ಥೆ ಇಂದು ಬೆಳೆದು ವಿಶಾಲ ಆಲದ ಮರವಾಗಿದೆ. ಬದಲಾದ ಕಾಲಘಟ್ಟದಲ್ಲಿ ವಿದ್ಯಾರ್ಥಿ ಸಮೂಹದ ಸರ್ವ ಅವಶ್ಯಕತೆಗಳನ್ನು ಪೂರೈಸಲು ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮದ್ ಕಂಡ ಕನಸು ಇಂದು ನನಸಾಗಿ ಪರಿವರ್ತಿತ ವಾಗುತ್ತಿದೆ.
1984ರ ಮೇ 22 ಶುಭಾರಂಭಗೊಂಡ ಸಂಸ್ಥೆಯು ಪ್ರಾರಂಭದಲ್ಲಿ ಸ್ವಂತ ಕಟ್ಟಡ ಹೊಂದಿರದೆ ಸರಕಾರಿ ಉರ್ದು ಶಾಲೆಯಲ್ಲಿ ತನ್ನ ಆರಂಭಿಕ ದಿನಗಳನ್ನು ಕಳೆಯಿತು. ತದನಂತರದಲ್ಲಿ ಹಳೆ ಕೆ.ಇ.ಬಿ. ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 1993ರಲ್ಲಿ ಸ್ವಂತ ಸ್ಥಳವನ್ನು ಖರೀದಿಸಿ, ಎಲ್‌ಕೆಜಿಯಿಂದ 5ನೇ ವರೆಗಿನ ತರಗತಿ ಯನ್ನು ಮುನ್ನಡೆಸಲಾಯಿತು. ಮುಂದೆ ಶಾಲೆಯು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕತೊಡಗಿದ್ದು, 1997ರಲ್ಲಿ ಪ್ರೌಢಶಾಲೆಯ ನೂತನ ಕಟ್ಟಡ ನಿರ್ಮಾಣ ವಾಯಿತು. 2001ರಲ್ಲಿ ಪದವಿ ಪೂರ್ವ ಕಾಲೇಜಿನ ಕನಸ್ಸು ಕಟ್ಟಡ ರೂಪದಲ್ಲಿ ಸಾಕಾರಗೊಂಡಿತು.







