ಉಡುಪಿ| ಎಸೆಸೆಲ್ಸಿ ಪರೀಕ್ಷೆ: ಗಣಿತ ವಿಷಯಕ್ಕೆ 118 ಮಂದಿ ಗೈರು
![ಉಡುಪಿ| ಎಸೆಸೆಲ್ಸಿ ಪರೀಕ್ಷೆ: ಗಣಿತ ವಿಷಯಕ್ಕೆ 118 ಮಂದಿ ಗೈರು ಉಡುಪಿ| ಎಸೆಸೆಲ್ಸಿ ಪರೀಕ್ಷೆ: ಗಣಿತ ವಿಷಯಕ್ಕೆ 118 ಮಂದಿ ಗೈರು](https://www.varthabharati.in/h-upload/2024/04/02/1257915-301669-1628272239.webp)
ಉಡುಪಿ : ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಈ ಬಾರಿಯ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮಂಗಳವಾರ ನಡೆದ ಗಣಿತ ಪರೀಕ್ಷೆಗೆ ಒಟ್ಟು 118 ಮಂದಿ ಗೈರುಹಾಜರಾಗಿದ್ದಾರೆ. ಇವರಲ್ಲಿ ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವ (ಪ್ರೆಷರ್) 70 ಹಾಗೂ ಮರು ಪರೀಕ್ಷೆ ಬರೆಯುತ್ತಿರುವ 48 ಮಂದಿ ಸೇರಿದ್ದಾರೆ.
ಇಂದಿನ ಪರೀಕ್ಷೆಗೆ 13525 ಮಂದಿ ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವ ಹಾಗೂ 393 ಮಂದಿ ರಿಪೀಟರ್ಸ್ ಸೇರಿದಂತೆ ಒಟ್ಟು 13,918 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 13455 ಮಂದಿ ಪ್ರೆಷರ್ ಹಾಗೂ 345 ಮಂದಿ ರಿಪೀಟರ್ಸ್ ಸೇರಿದಂತೆ ಒಟ್ಟು 13800 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಬೈಂದೂರು ವಲಯದಲ್ಲಿ 10(6+4) ಮಂದಿ, ಕುಂದಾಪುರ ವಲಯದಲ್ಲಿ 26(12+14), ಕಾರ್ಕಳ ವಲಯದಲ್ಲಿ 25 (19+6), ಉಡುಪಿ ಉತ್ತರ ವಲಯದಲ್ಲಿ 33 (21+12) ಹಾಗೂ ಉಡುಪಿ ದಕ್ಷಿಣ ವಲಯದಲ್ಲಿ 24(12+12) ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಐ ಪ್ರಕಟಣೆ ತಿಳಿಸಿದೆ.