ಮಣಿಪಾಲ: ಜ.12ರಿಂದ ತಪೋವನ ಸಂಸ್ಥೆಯಿಂದ ‘ಸ್ವಾಸ್ಥ್ಯ ರಕ್ಷಣಂ’
ಉಡುಪಿ: ಮಣಿಪಾಲದ ತಪೋವನ ಲೈಫ್‌ಸ್ಪೇಸ್ ಸಂಘಟನೆ ಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಯುಷ್ ಇಲಾಖೆಗಳ ಸಹಯೋಗದೊಂದಿಗೆ ಮಣಿಪಾಲದ ಆದರ್ಶನ ನಗರದಲ್ಲಿರುವ ತಪೋವನ ಸಂಸ್ಥೆಯಲ್ಲಿ ಇದೇ ಜ.12ರಿಂದ 14ರವರೆಗೆ ‘ಸ್ವಾಸ್ಥ್ಯ ರಕ್ಷಣಂ’ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ ಸಲಹೆಗಾರರಾದ ಡಾ.ವಾಣಿಶ್ರೀ ಐತಾಳ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಪ್ರದಾಯ, ಆಯುರ್ವೇದ, ಯೋಗ, ನ್ಯಾಚರೋಪಥಿ ಮುಂತಾದ ಪದ್ಧತಿಗಳನ್ನು ಸಬಲೀಕರಣಗೊಳಿಸುವ ಉದ್ದೇಶದೊಂದಿಗೆ ಪ್ರಾರಂಭಗೊಂಡಿರುವ ಸಂಸ್ಥೆ, ಮೂರು ದಿನಗಳ ಕಾಲ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಿದೆ ಎಂದರು.
ಸಂಸ್ಥೆಯ ನಿರ್ದೇಶಕ ಯು.ವೆಂಕಟೇಶ ಸೇಠ್ ಅವರು ಮಾತನಾಡಿ, ಜ.12ರಂದು ಬೆಳಗ್ಗೆ 10:30ಕ್ಕೆ ಮಣಿಪಾಲ ಕೆಎಂಸಿಯ ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಸುಲತಾ ಭಂಡಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಉಪಸ್ಥಿತರಿರುವರು ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ‘ದಿನಚರ್ಯೆಯ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ತಜ್ಞ ಡಾ.ಶ್ರೀಪತಿ ಅಡಿಗ ನೇತೃತ್ವದಲ್ಲಿ ಸಂವಾದ ನಡೆಯಲಿದೆ. ಆರೋಗ್ಯಕರ ಸಲಾಡ್ ತಯಾರಿ ಸ್ಪರ್ಧೆಯೂ ನಡೆಯಲಿದೆ. ಸಂಜೆ 4ರಿಂದ ಡಾ.ಭಾವನಾ ಭಟ್ ಅವರು ‘ಧ್ಯಾನ ಕಾರ್ಯಾಗಾರ’ ನಡೆಸಿಕೊಟ್ಟರೆ, ಬಳಿಕ ಗುರುಕೃಪಾ ಯೋಗ ವಿದ್ಯಾ ಪ್ರತಿಷ್ಠಾನದ ಸತೀಶ್ ಸೇಠ್ ಹಾಗೂ ತಂಡದಿಂದ ‘ರೇಖಿ ಚಿಕಿತ್ಸಾ’ ಕಾರ್ಯಾಗಾರ ನಡೆಯಲಿದೆ.
ಸಂಜೆ 6:00ರಿಂದ ಚಿಕ್ಕಮಗಳೂರಿನ ಶ್ರೀರೇಣುಕಾ ಮಾತೆ ತೊಗಲು ಗೊಂಬೆ ಮೇಳ ಕಲಾತಂಡದಿಂದ ದೇವರಾಜು ಮತ್ತು ತಂಡದಿಂದ ‘ಇಂದ್ರಜೀತ್ ಕಾಳಗ’ ಎಂಬ ತೊಗಲು ಗೊಂಬೆಯಾಟದ ಪ್ರದರ್ಶನ ನಡೆಯಲಿದೆ.
ಜ.13ರಂದು ಬೆಳಗ್ಗೆ 10ರಿಂದ ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರಮನೆ ‘ಸ್ವಲ್ಪ ಮಾತಾಡಿ ಪ್ಲೀಸ್’ ಎಂಬ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 12ರಿಂದ ಡಾ.ಪರೀಕ್ಷಿತ್ ನಾವಡ ಅವರು ‘ವೈದ್ಯಕೀಯ ಜೋತಿಷ್ಯ’ ಬಗ್ಗೆ ಹಾಗೂ ಡಾ.ರಾಘವೇಂದ್ರ ‘ನವಗ್ರಹ ವನ’ದ ಕುರಿತು ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಅಪರಾಹ್ನ 2ರಿಂದ ಡಾ.ನಾವಡ ‘ಮನೆಮದ್ದು’, ಡಾ.ಶಿಲ್ಪಾ ಅವರು ‘ಡಿಜಿಟಲ್ ಡಿಟಾಕ್ಸ್’ ಬಗ್ಗೆ ಸಂಜೆ 5ರಿಂದ ಡ.್ಮತಾ ರಜನೀಶ್ ‘ಆಯುರ್ವೇದ ಮತ್ತು ಆಹಾರ ಕ್ರಮ’ದ ಬಗ್ಗೆ ತಿಳಿಸಿಕೊಡಲಿದ್ದಾರೆ. ಬಳಿಕ ಉಡುಪಿಯ ಶ್ರೀಸುಬ್ರಹ್ಮಣ್ಯ ಯಕ್ಷಗಾನ ಕಲಾಮಂಡಳಿಯಿಂದ ‘ಮಧುರಾ ಮಹೀಂದ್ರ’ ಯಕ್ಷಗಾನ ಪ್ರದರ್ಶನವಿದೆ.
ಕೊನೆಯ ದಿನವಾದ ಜ.14ರ ರವಿವಾರದಂದು ಲೇಖಕಿಯರಾದ ಸಂದ್ಯಾ ಶೆಣೈ, ಜ್ಯೋತಿ ಮಹಾದೇವ್, ರೇವತಿ ನಾಡಿಗೇರ್, ಶಿಲ್ಪಾ ಜೋಶಿ, ಪೂರ್ಣಿಮಾ ಸುರೇಶ್ ಹಾಗೂ ಅಮಿತಾಂಜಲಿ ಕಿರಣ್ ಅವರು ‘ಕನ್ನಡ ಸಾಹಿತ್ಯ ಮತ್ತು ಪಾಕಶಾಸ್ತ್ರ’ ಕುರಿತು ಚರ್ಚಿಸಲಿದ್ದಾರೆ. ಅದೇ ರೀತಿ ‘ವೆಲ್‌ನೆಸ್ ಟೂರಿಸಂ’ ಕುರಿತು ಡಾ.ಶ್ಯಾಮ್ ನಡಿಗುಲ, ಮನೋಹರ ಶೆಟ್ಟಿ, ಡಾ.ವಿನಯಚಂದ್ರ ಶೆಟ್ಟಿ ಸಂವಾದ ನಡೆಸಲಿದ್ದಾರೆ.
ಅಪರಾಹ್ನ 2ರ ಬಳಿಕ ಡಾ.ಬಬಿತಾ ರಾವ್ ಅವರು ‘ಸೌಂಡ್ ಹೀಲಿಂಗ್’ ಕುರಿತು ಹಾಗೂ ಶಿವಮೊಗ್ಗದ ಡಾ.ಪ್ರೀತಮ್ ಅವರು ‘ಡಯಾಬಿಟಿಸ್ ರಿವರ್ಸಲ್’ ಕುರಿತು ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಪೋವನದ ಉಪಾಧ್ಯಕ್ಷೆ ರೇವತಿ ನಾಡಿಗೇರ್ ಹಾಗೂ ಮಹೇಶ್ ಐತಾಳ್ ಉಪಸ್ಥಿತರಿದ್ದರು.







