ಉಡುಪಿ: ಪ್ರತ್ಯೇಕ ಪ್ರಕರಣ; ಇಬ್ಬರಿಗೆ ಆನ್‌ಲೈನ್‌ನಲ್ಲಿ 12 ಲಕ್ಷ ರೂ. ವಂಚನೆ

ಉಡುಪಿ: ಆನ್‌ಲೈನ್ ವಂಚನೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಒಟ್ಟು 12 ಲಕ್ಷ ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಂದ ಲಪಟಾಯಿಸಿದ ಪ್ರಕರಣಗಳು ಉಡುಪಿಯಿಂದ ವರದಿಯಾಗಿದೆ.
ಉಡುಪಿಯ ಹಿರಿಯ ನಾಗರಿಕರಾದ ಟಿ.ಜೀವನ್ (61) ಮೈತ್ರಿ ಕಾಂಪ್ಲೆಕ್ಸ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಫೆ.22ರಂದು ಅಪರಿಚಿತ ವ್ಯಕ್ತಿ ಮೊಬೈಲ್‌ನಿಂದ ಕರೆ ಮಾಡಿ ತಾನು ಸಿಎಂಪಿಎಫ್ ಧನ್‌ಭಾಗ್ ಕಚೇರಿಯಿಂದ ಕರೆ ಮಾಡುತಿದ್ದು, ತಮಗೆ ಬರಬೇಕಾದ ಪೆನ್ಶನ್ ಆರ್ಡರ್ ಮಾಡಿಕೊಡುವುದಾಗಿ ನಂಬಿಸಿ ಅವರಿಂದ ನೆಟ್ ಬ್ಯಾಂಕಿಂಗ್ ವಿವರ, ಎಟಿಎಂ ಕಾರ್ಡ್ ವಿವರ ಪಡೆದು ಟಿ.ಜೀವನ್ ಹೆಸರಿನಲ್ಲಿ ಓ.ಡಿ. ಲೋನ್ ಖಾತೆ ತೆರೆದು ಫಿಕ್ಸೆಡ್ ಡಿಪಾಸಿಟ್‌ನಲ್ಲಿದ್ದ 10,20,000 ರೂ.ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ಅವರು ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಂ ಎಪ್ಲಿಕೇಶನ್‌ನಲ್ಲಿ ಮಚ್ಚೇಂದ್ರನಾಥ್ (50) ಎಂಬವ ರನ್ನು ಸಂಪರ್ಕಿಸಿ ಉದ್ಯೋಗದ ಬಗ್ಗೆ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿದ್ದು, ಫೆ.9ರಂದು ಆರೋಪಿಗಳು ಸೂಚಿಸಿದ ಖಾತೆಗೆ ಹಂತಹಂತವಾಗಿ ಒಟ್ಟು 2,08,463 ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.
ಆದರೆ ಆರೋಪಿಗಳು ಲಾಭಾಂಶವನ್ನು ನೀಡದೇ, ತಮ್ಮಿಂದ ಪಡೆದ ಹಣವನ್ನು ಹಿಂದಿರುಗಿಸದೇ ವಂಚಿಸಿರುವುದಾಗಿ ಮಚ್ಚೇಂದ್ರನಾಥ ಅವರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.







