ಉಡುಪಿ: ಫೆ.12ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ, ಫೆ.8: ಕುಂಜಿಬೆಟ್ಟಿನಲ್ಲಿರುವ ಸುನಾಗ್ ಅಥೋಕೇರ್ ಹಾಗೂ ಮಲ್ಪಿಸ್ಪೆಷಾಲಿಟಿ ಸೆಂಟರ್, ಮಣಿಪಾಲ ಕೆಎಂಸಿಯ ಹೆರಿಗೆ ಮತ್ತು ಸ್ತ್ರೀರೋಗ ವಿಭಾಗದ ಸಹಯೋಗದಲ್ಲಿ ಇದೇ ಫೆ.12ರ ಬುಧವಾರ ಉಡುಪಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಂಧಿವಾತ ಮತ್ತು ಮೂಳೆಸಾಂದ್ರತೆ ಹಾಗೂ ಮಹಿಳಾ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಸುನಾಗ್ ಆಸ್ಪತ್ರೆಯ ಸಂಸ್ಥಾಪಕ ಹಾಗೂ ಖ್ಯಾತ ಮೂಳೆ ಮತ್ತು ಎಲುಬು ತಜ್ಞ ಡಾ.ನರೇಂದ್ರ ಕುಮಾರ್ ಎಚ್.ಎಸ್. ತಿಳಿಸಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.12ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಈ ಶಿಬಿರ ಕುಂಜಿಬೆಟ್ಟಿನಲ್ಲಿರುವ ಶಾರದಾ ಕಲ್ಯಾಣಮಂಟಪದ ಜ್ಞಾನಮಂದಿರ ದಲ್ಲಿ ನಡೆಯಲಿದೆ ಎಂದರು.
ಶಿಬಿರದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣೆ, ಗಭ1ಕಂಠ ತಪಾಸಣೆ, ಸ್ತನಪರೀಕ್ಷೆ, ರಕ್ತ ಪರೀಕ್ಷೆ ಹಾಗೂ ಹಿಮೋಗ್ಲೋಬಿನ್ ತಪಾಸಣೆ ನಡೆಯಲಿದ್ದು, ತಜ್ಞ ವೈದ್ಯರು ಉಚಿತ ಸಲಹೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ ಎಂದು ಡಾ.ನರೇಂದ್ರಕುಮಾರ್ ವಿವರಿಸಿದರು.
ಶಿಬಿರದಲ್ಲಿ ಹಿರಿಯ ಸ್ತ್ರೀರೋಗ ತಜ್ಞೆ ಡಾ.ಸುಲೋಚನ ಹೊಳ್ಳ, ಹಿರಿಯ ಶಸ್ತ್ರ ಚಿಕಿತ್ಸಕರಾದ ಕ್ಯಾ.ಡಾ.ಹೇಮಚಂದ್ರ ಹೊಳ್ಳ, ಡಾ.ವಿಜಯ ವೈ.ಬಿ., ಕೆಎಂಸಿಯ ಕ್ಯಾನ್ಸರ್ ಸ್ತ್ರೀರೋಗ ತಜ್ಞೆ ಡಾ.ಶ್ಯಾಮಲಾ ರೋಗಿಗಳ ತಪಾಸಣೆ ನಡೆಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ತ್ರೀರೋಗ ತಜ್ಞೆ ಡಾ.ವಿಜಯ ವೈ.ಬಿ., ಡಾ.ವೀಣಾ ನರೇಂದ್ರ ಹಾಗೂ ಶೋಭಾ ಯು.ಆಚಾರ್ಯ ಉಪಸ್ಥಿತರಿದ್ದರು.







