ಅಕ್ಟೋಬರ್‌ನಿಂದ ರಾಜ್ಯಾದ್ಯಂತ ಡಾ.ಕಾರಂತರ 125ನೇ ಜನ್ಮದಿನಾಚರಣೆ

ಉಡುಪಿ: ಮುಂದಿನ ಅಕ್ಟೋಬರ್ ತಿಂಗಳಿನಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿ ಡಾ.ಕೋಟ ಶಿವರಾಮ ಕಾರಂತರ 125ನೇ ಜನ್ಮದಿನಾಚರಣೆಯನ್ನು ನಾಡಿನಾದ್ಯಂತ ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ತಿಳಿಸಿದ್ದಾರೆ.
ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಡಾ.ಗಣನಾಥ ಎಕ್ಕಾರು, ಇದರ ಅಂಗವಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಎರಡು ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಇದೆ. ಅಲ್ಲದೇ ಅಧ್ಯಯನ ಶಿಬಿರ, ರಂಗ ಪ್ರಯೋಗಗಳು, ಮಕ್ಕಳಿಗಾಗಿ ಕಾರಂತ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಧ್ಯೇಯೋದ್ದೇಶಗಳನ್ನು, ಸಾಧನೆಗಳನ್ನು ವಿವರಿಸಿದ ಡಾ.ಗಣನಾಥ ಎಕ್ಕಾರು, ಸರಕಾರ 2002ರಲ್ಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚಿಸಿದ್ದರೂ, 2024ರಲ್ಲಿ ಅದಕ್ಕೆ ಹೊಸ ರೂಪ ನೀಡಿ, ತಮ್ಮ ಅಧ್ಯಕ್ಷತೆಯಲ್ಲಿ 9 ಮಂದಿ ಕ್ರಿಯಾಶೀಲ ಸದಸ್ಯರ ಸಮಿತಿ ರಚಿಸಿತು ಎಂದರು.
ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ತಮ್ಮ ನೇತೃತ್ವದಲ್ಲಿ ಕಾರಂತರ ಕುರಿತಂತೆ ನಾಡಿನಾದ್ಯಂತ 54 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅರಿವಿನ ಬೆಳಕು ಉಪನ್ಯಾಸ ಮಾಲಿಕೆ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ರಂಗೋಲಿಯಲ್ಲಿ ಕಾರಂತರ ಬದುಕು-ಬರಹ ಪರಿಚಯ, ಕತೆ, ಕಾದಂಬರಿ, ನಾಟಕಗಳ ಕುರಿತು ಅಧ್ಯಯನ ಶಿಬಿರಗಳನ್ನು ನಡೆಸಲಾಗಿದೆ ಎಂದು ಅವರು ವಿವರಿಸಿದರು.
2026-27ನೇ ಸಾಲಿನ ರೆಪರ್ಟರಿಗೆ ಸಿದ್ಧತೆ: ಕರಾವಳಿ ರಂಗಾಯಣ ಎಂದು ಮರು ನಾಮಕರಣಗೊಂಡಿರುವ ನಿರ್ದೇಶಕ ಬಿ.ಆರ್.ವೆಂಕಟರಮಣ ಮಾತನಾಡಿ, ಯಕ್ಷ ರಂಗಾಯಣ 2025-26ನೇ ಸಾಲಿನಲ್ಲಿ 12ಮಂದಿ ರೆಪರ್ಟರಿ ಕಲಾವಿದರನ್ನು ನೇಮಕ ಮಾಡಿಕೊಂಡು ನಾಲ್ಕು ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಿದೆ. ವಿವಿದೆಡೆಗಳಲ್ಲಿ ಇದರ 70ಕ್ಕೂ ಅಧಿಕ ಪ್ರದರ್ಶನಗಳು ನಡೆದಿವೆ. ಅದೇ ರೀತಿ 2026-27ನೇ ಸಾಲಿನಲ್ಲೂ 12 ಮಂದಿ ಕಲಾವಿದರನ್ನೊಳಗೊಂಡ ರೆಪರ್ಟರಿ ತಂಡವನ್ನು ನೇಮಿಸಿಕೊಂಡು 3-4 ನಾಟಕಗಳನ್ನು ತಿರುಗಾಟದ ಮೂಲಕ ಪ್ರದರ್ಶಿಸಲು ಪೂರ್ವ ತಯಾರಿ ನಡೆಯುತ್ತಿದೆ ಎಂದರು.
ಪ್ರಾದೇಶಿಕ ಭಾಷೆ ಹಾಗೂ ಸಾಂಸ್ಕೃತಿಕ ಸೊಗಡನ್ನು ಜೀವಂತವಾಗಿಡಲು 2002ರಲ್ಲಿ ಕಾರ್ಕಳದಲ್ಲಿ ಪ್ರಾರಂಭ ಗೊಂಡ ರಂಗಾಯಣದ ಆರನೇ ಶಾಖೆ ‘ಯಕ್ಷ ರಂಗಾಯಣ’ದ ಮೊದಲ ನಿರ್ದೇಶಕರಾಗಿ ರಂಗಕರ್ಮಿ ಜೀವನ ರಾಮ್ ಸುಳ್ಯ ಕಾರ್ಯನಿರ್ವಹಿಸಿದ್ದರು ಎಂದ ವೆಂಕಟರಮಣ ಐತಾಳ್, ದೇಶದ ಪ್ರಮುಖ ರಂಗಕರ್ಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಬಿ.ವಿ.ಕಾರಂತರು ನಿರ್ದೇಶಕರಾಗಿ 1989ರಲ್ಲಿ ಮೈಸೂರಿನಲ್ಲಿ ರಂಗಾಯಣ ಪ್ರಾರಂಭಗೊಂಡಿದ್ದು, ಬಳಿಕ ರಾಜ್ಯದ ಪ್ರಾದೇಶಿಕ ಭಾಷೆ ಮತ್ತು ಸಾಂಸ್ಕೃತಿಕ ಸೊಗಡನ್ನು ಜೀವಂತವಿರಿಸಲು ಧಾರವಾಡ, ಶಿವಮೊಗ್ಗ, ಗುಲ್ಬರ್ಗ ಹಾಗೂ ದಾವಣಗೆರೆಯಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಆಧುನಿಕ ರಂಗಭೂಮಿಯ ಪರಿಕಲ್ಪನೆಯಲ್ಲಿ ಯಕ್ಷಗಾನವನ್ನು ಕಟ್ಟುವ ಹಾಗೂ ಯಕ್ಷಗಾನದ ಪುರಾಣ, ಕತೆ, ಕಾವ್ಯಗಳನ್ನು ಬಳಸಿಕೊಂಡು ರಂಗಭೂಮಿ ಕಟ್ಟುವ ಜೊತೆಗೆ ಕರಾವಳಿಯ ಶ್ರೀಮಂತ ಪ್ರಾದೇಶಿಕ ಸಾಂಸ್ಕೃತಿಕ ವೈವಿದ್ಯತೆಯನ್ನು ಜನತೆಗೆ ಪರಿಚಯಿಸುವುದು ತಮ್ಮ ಗುರಿಯಾಗಿದೆ ಎಂದು ಐತಾಳ್ ತಿಳಿಸಿದರು.
ಕರಾವಳಿ ರಂಗಾಯಣದ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಅದಕ್ಕಾಗಿ ಕಾರ್ಕಳದಲ್ಲಿ ಮೀಸಲಿಟ್ಟ ಮೂರು ಎಕರೆ ಜಾಗದಲ್ಲಿ ನಡೆಯುತ್ತಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿರಿದ್ದರು.






