ಕಾರ್ಕಳ, ಕಾಪುವಿನಲ್ಲಿ ಭಾರೀ ಮಳೆ; 13 ಮನೆಗಳಿಗೆ ಹಾನಿ

ಉಡುಪಿ, ಮಾ.13: ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಕಾರ್ಕಳ ಹಾಗೂ ಕಾಪು ತಾಲೂಕುಗಳ ಜನತೆಗೆ ನಿನ್ನೆ ಸಂಜೆ ಸುರಿದ ಮಳೆಯಿಂದ ತಂಪಿನ ಸಿಂಚನವಾಗಿದೆ. ಕಾರ್ಕಳದಲ್ಲಿ 14 ಮಿ.ಮೀ. ಹಾಗೂ ಕಾಪುವಿನಲ್ಲಿ 10 ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.
ಗುಡುಗು-ಸಿಡಿಲು ಹಾಗೂ ಬಲವಾದ ಗಾಳಿಯೊಂದಿಗೆ ಸುರಿದ ಮಳೆಯಿಂದ ಎರಡೂ ತಾಲೂಕುಗಳಲ್ಲಿ 12ಕ್ಕೂ ಅಧಿಕ ಮನೆಗಳಿಗೆ ಹಾಗೂ ದನದ ಕೊಟ್ಟಿಗೆಗೆ ಸುಮಾರು ಐದು ಲಕ್ಷ ರೂ.ಗಳಷ್ಟು ಹಾನಿಯಾದ ಬಗ್ಗೆಯೂ ವರದಿಗಳು ಬಂದಿವೆ.
ಕಾರ್ಕಳದ ಕಸಬಾದ ಆನಂದ್ ಅವರ ಮನೆಗೆ 30ಸಾವಿರ, ನಿಟ್ಟೆಯ ಶೀನ ದೇವಾಡಿಗರ ಮನೆಗೆ 90ಸಾವಿರ, ಕುಕ್ಕುಂದೂರಿನ ಕ್ಲೈಮೆಂಟ್ ವಲೇರಿಯನ್ ಅರಾನ್ಹಾ ಅವರ ಮನೆಗೆ 25ಸಾವಿರ, ಕಾಂತಾವರದ ಸಂಪ ಮೇರ ಅವರ ಮನೆಗೆ 30ಸಾವಿರ, ಮುಂಡ್ಕೂರಿನ ಸೀನ ಮೂಲ್ಯರ ಮನೆಗೆ 80, ನಾರಾಯಣರ ಮನೆಗೆ 50 ಹಾಗೂ ಚಂದು ಪೂಜಾರಿ ಮನೆಗೆ 20ಸಾವಿರ ರೂ.ನಷ್ಟವಾಗಿದೆ.
ರೆಂಜಾಳದ ಸಂಜೀವ ಮೇರ ಮನೆಗೆ 20,ಮುಂಡ್ಕೂರಿನ ಕೊರಗ ಶೆಟ್ಟಿ ಮನೆಗೆ 40ಸಾವಿರ, ಎರ್ಲಪಾಡಿಯ ಕಮಲ ಆಚಾರ್ತಿ ಮನೆಯ ದನದ ಕೊಟ್ಟಿಗೆ ಹಾನಿಯಾಗಿದೆ. ಕಾಪು ತಾಲೂಕಿನ ನಂದಿಕೂರು ಮತ್ತು ಪಲಿಮಾರು ಗ್ರಾಮದ ಲಕ್ಷ್ಮಣ ಪೂಜಾರಿ ಮತ್ತು ವಿಠಲ ಪೂಜಾರಿ ಅವರ ಮನೆಗೆ ತಲಾ 40ಸಾವಿರ ರೂ.ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ.