ಉಡುಪಿ: ಮಾ. 13ರಿಂದ ಮುರಾರಿ- ಕೆದ್ಲಾಯ ರಂಗೋತ್ಸವ
ಉಡುಪಿ, ಮಾ.10: ಉಡುಪಿಯ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಆಶ್ರಯದಲ್ಲಿ ಪ್ರತಿವರ್ಷ ನಡೆಯುವ ಮುರಾರಿ- ಕೆದ್ಲಾಯ ರಂಗೋತ್ಸವ ಮಾರ್ಚ್ 13, 14 ಮತ್ತು 15ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.
ಮಾ.13ರ ಶುಕ್ರವಾರ ಸಂಜೆ 5:45ಕ್ಕೆ ರಂಗೋತ್ಸವವನ್ನು ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮತ್ತು ಉಡುಪಿ ಎಂ.ಜಿ.ಎಂ.ಕಾಲೇಜು ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ನಂತರ ರಂಗಾಯಣ ಮೈಸೂರು ರೆಪರ್ಟರಿ ಕಲಾವಿದರಿಂದ ಅಂಬೇಡ್ಕರ್ ಕೊಲಾಜ್ (ರಚನೆ: ಕೋಟಿಗಾನಹಳ್ಳಿ ರಾಮಯ್ಯ, ನಿರ್ದೇಶನ:ಚಿದಂಬರರಾವ್ ಜಂಬೆ) ನಾಟಕ ಪ್ರದರ್ಶನ ಗೊಳ್ಳಲಿದೆ.
ಮಾ.14ರ ಶನಿವಾರ ಸಂಜೆ 6:30ಕ್ಕೆ ಸಮುದಾಯ ಶಿವಮೊಗ್ಗ ಕಲಾವಿದರಿಂದ ನೀರೊಳಗಣ ಕಿಚ್ಚು (ರಂಗರೂಪ: ಡಾ.ಸಾಸ್ವೇಹಳ್ಳಿ ಸತೀಶ್, ಐ.ಕೆ. ಬೊಳುವಾರು, ನಿರ್ದೇಶನ: ಡಾ.ಸಾಸ್ವೇಹಳ್ಳಿ ಸತೀಶ್) ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.15ರ ರವಿವಾರ ಸಂಜೆ 6:30ಕ್ಕೆ ಸಮುದಾಯ ಬೆಂಗಳೂರು ಕಲಾ ವಿದರಿಂದ ‘ಭಗವಂತನ ಮರಣ’ (ಮಲಯಾಳಂ ಮೂಲ ಕತೆ: ಕೆ.ಆರ್. ಮೀರಾ, ಕನ್ನಡಕ್ಕೆ: ಕೆ.ಪ್ರಭಾಕರನ್, ರಂಗರೂಪ/ನಿರ್ದೇಶನ: ಡಾ.ಸ್ಯಾಮ್ ಕುಟ್ಟಿ ಪಟ್ಟಂಕರಿ) ನಾಟಕ ಪ್ರದರ್ಶನಗೊಳ್ಳಲಿದೆ ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







