ಉಡುಪಿ: ನ.13ರಿಂದ ಲೆಕ್ಕಪರಿಶೋಧಕರ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

ಉಡುಪಿ, ನ.12: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ದಕ್ಷಿಣ ಭಾರತ ಪ್ರದೇಶಿಕ ಮಂಡಳಿಯ (ಎಸ್‌ಐಆರ್‌ಸಿ) ಉಡುಪಿ ಶಾಖೆಯು ಸಾರ್ವಜನಿಕ ಮತ್ತು ಸರಕಾರಿ ಹಣಕಾಸು ನಿರ್ವಹಣಾ ಐತಿಯ ಆಶ್ರಯದಲ್ಲಿ ಆಓಜಿಸುತ್ತಿರುವ ಎರಡು ದಿನಗಳ ‘ಸಮುದ್ಯತಿ-2026’ ರಾಷ್ಟ್ರೀಯ ಸಮ್ಮೇಳನ ನಾಳೆ ಬೆಳಗ್ಗೆ 10 ಗಂಟೆಗೆ ಅಜ್ಜರಕಾಡಿನ ಪುರಭವನದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಐಸಿಓಐ ಉಡುಪಿ ಶಾಖೆಯ ಅಧ್ಯಕ್ಷ ಸಿಎ ರಾಘವೇಂದ್ರ ಮೊಗೇರಾಯ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೇಶದ ವಿವಿಧ ಭಾಗಗಳಿಂದ ಆಗಮಿಸುವ ಲೆಕ್ಕಪರಿಶೋಧಕರು, ಉದ್ಯಮ ಕ್ಷೇತ್ರದ ವೃತ್ತಿಪರರು ಹಾಗೂ ವಿಷಯ ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ 400ರಿಂದ 500ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೊಗೇರಾಯ ತಿಳಿಸಿದರು.
ದೇಶದ ಲೆಕ್ಕಪರಿಶೋಧಕರಲ್ಲಿ ಹಲವು ಗಣ್ಯರು ಸಮ್ಮೇಳನದಲ್ಲಿ ಉಪಸ್ಥಿತರಿರುವರು. ನೇರ ತೆರಿಗೆ ಕ್ಷೇತ್ರದಲ್ಲಿ ಅಪಾರ ಪರಿಣತಿ ಹೊಂದಿರುವ ಹೊಸದಿಲ್ಲಿಯ ಸಿಎ ಡಾ.ಗಿರೀಶ್ ಅಹುಜಾ, ಚೆನ್ನೈನ ಸಿಎ ಎಂ.ಪಿ.ವಿಜಯ ಕುಮಾರ್, ಐಸಿಎಐನ ಮಾಜಿ ಅಧ್ಯಕ್ಷ ಸಿಎ ಡಾ.ದೇಬಾಶಿಸ್ ಮಿಶ್ರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸುವರು ಎಂದರು.
ಎರಡು ದಿನಗಳಲ್ಲಿ ವೃತ್ತಿಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತು ತಾಂತ್ರಿಕ ಗೋಷ್ಠಿ, ಚರ್ಚೆ, ಸಂವಾದಗಳನ್ನು ಆಯೋಜಿಸಲಾಗಿದೆ. ಹೊಸ ಆದಾಯ ತೆರಿಗೆ ಕಾಯ್ದೆ 2025, ತೆರಿಗೆ ಸುಧಾರಣೆಗಳು, ವೃತ್ತಿಪರ ನೈತಿಕ ಸಂಹಿತೆ 2026 ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಖೆಯ ಪದಾಧಿಕಾರಿಗಳಾದ ಅಶ್ವಥ್ ಜೆ.ಶೆಟ್ಟಿ, ಕೆ.ಲಕ್ಷ್ಮೀಶ ರಾವ್, ಅರ್ಚನಾ ಆರ್ ಮಯ್ಯ, ಪ್ರದೀಪ್ ಜೋಗಿ ಹಾಗೂ ಕೆ.ಸುರೇಂದ್ರ ನಾಯಕ್ ಉಪಸ್ಥಿತರಿದ್ದರು.






