ಶಿರ್ವ| ಪೊಲೀಸರ ಹೆಸರಿನಲ್ಲಿ ಮಹಿಳೆಗೆ 14 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಶಿರ್ವ, ಜು.19: ಪೊಲೀಸರೆಂದು ನಂಬಿಸಿ ಮಹಿಳೆಯರಿಂದ ಲಕ್ಷಾಂತರ ರೂ. ಹಣ ವನ್ನು ಆನ್‌ಲೈನ್ ಮೂಲಕ ವಂಚಿಸಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇರಿ ಎಂಬವರ ಮೊಬೈಲ್‌ಗೆ ಜು.9ರಂದು ಕರೆ ಬಂದಿರುವುದನ್ನು ಸ್ವೀಕರಿಸಿದ್ದು, ಕರೆ ಮಾಡಿದ ವ್ಯಕ್ತಿಯು ಹಿಂದಿ ಭಾಷೆಯಲ್ಲಿ ನಿಮ್ಮ ಮೊಬೈಲ್ ನಂಬರ್‌ನಿಂದ ದೂರು ಬಂದಿದೆ, ಬಿಹಾರದ ನರೇಶ್ ಗೋಯಲ್ ಎಂಬ ಕೋಟ್ಯಾಧಿಪತಿ ಅವ್ಯವಹಾರ ನಡೆಸಿದ್ದು, ಅತನಿಂದ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ, ನಿಮ್ಮನ್ನು ಈ ಪ್ರಕರಣದಿಂದ ತೆಗೆಯಬೇಕಾದರೆ ನಿಮ್ಮ ಖಾತೆಯಲ್ಲಿ ಹಣ ಇಲ್ಲ ಎಂಬುದಾಗಿ ಸರಕಾರಕ್ಕೆ ತೋರಿಸಬೇಕು ಎಂದು ಹೇಳಿದ್ದರು.
ಅದಕ್ಕೆ ಮೇರಿ ಅದನ್ನು ನಿರಾಕರಿಸಿದ್ದರು. ಆಗ ಕರೆ ಮಾಡಿದ ವ್ಯಕ್ತಿಯು, ಬೇರೆ ಅಧಿಕಾರಿಯವರೊಂದಿಗೆ ಮಾತನಾಡುವಂತೆ ಹೇಳಿ, ನಿಮ್ಮ ಮೇಲೆ ಮುಂಬೈ ಕೋಲಬಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾ ಗಿದೆ ಎಂದು ಬೆದರಿಸಿದನು. ಬಳಿಕ ಮೊಬೈಲ್‌ಗೆ ಸಂದೀಪ್ ಜಾದವ್ ಎಂಬಾತನು ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿ ಪೊಲೀಸ್ ಟೀಂ ಇರುವ ವಿಡಿಯೋ ತೋರಿಸಿ ಬೆದರಿಸಿದ್ದು, ಇದರಿಂದ ಮೇರಿ ಅವರನ್ನು ಪೊಲೀಸರೆಂದು ನಂಬಿದರು.
ಸಂದೀಪ್ ಜಾದವ್ ಎಂಬಾತನು ಮೇರಿ ಅವರ ಬ್ಯಾಂಕ್ ವಿವರವನ್ನು ಮತ್ತು ಆಧಾರ್ ಕಾರ್ಡ್ ವಿವರ ವನ್ನು ವಿಡಿಯೋ ಕಾಲ್ ಮಾಡಿ ಪಡೆದು ಕೊಂಡಿದ್ದನು. ಆತನ ಬೆದರಿಕೆಯಿಂದ ಮೇರಿ ಜು.14ರಂದು 14,10,000 ರೂ. ಹಣವನ್ನು ಅವರ ಖಾತೆಗೆ ವರ್ಗಾಯಿಸಿ ವಂಚನೆಗೆ ಒಳಗಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.







