ಉಡುಪಿಯಲ್ಲಿ ಸೆ.14, 15ರಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

ಉಡುಪಿ, ಸೆ.13: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೆ.14 ಮತ್ತು 15ರಂದು ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಸಂಭ್ರಮ ನಡೆಯಲಿದೆ. ರವಿವಾರ ಮಧ್ಯರಾತ್ರಿ 12:11ಕ್ಕೆ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಅರ್ಘ್ಯ ಪ್ರದಾನ ನಡೆಯಲಿದೆ.
ಇಂದು ಶ್ರೀಕೃಷ್ಣ ಮಠದಲ್ಲಿ ಹಾಗೂ ಉಡುಪಿ ನಗರದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆಗಳು ನಡೆದವು. ಮಠದಲ್ಲಿ ಪಾಕಶಾಲೆಯಲ್ಲಿ ಹತ್ತಾರು ಮಂದಿ ಪಾಕತಜ್ಞರು ಲಕ್ಷಾಂತರ ಸಂಖ್ಯೆಯಲ್ಲಿ ಬಗೆಬಗೆಯ ಉಂಡೆ ಹಾಗೂ ಚಕ್ಕುಲಿಗಳನ್ನು ಕಳೆದ ಎರಡು ಮೂರು ದಿನಗಳಿಂದ ತಯಾರಿಸುತಿದ್ದಾರೆ.
ಈ ಬಾರಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಾರೀ ಸಂಖ್ಯೆಯಲ್ಲಿ ವೇಷಗಳು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ನಾಳೆ ಬೆಳಗ್ಗೆಯಿಂದ ಹುಲಿವೇಷ ಸೇರಿದಂತೆ ಬಗೆಬಗೆಯ, ವರ್ಣವೈವಿಧ್ಯದ ವೇಷಗಳು ನಗರದಲ್ಲಿ ಸಂಚರಿಸಲಿವೆ. ಒಂದರ್ಥದಲ್ಲಿ ಉಡುಪಿ ನಗರ ಮುಂದಿನೆರಡು ದಿನಗಳ ಕಾಲ ವೇಷಗಳಿಂದಲೇ ತುಂಬಿರುವ ಸಾಧ್ಯತೆ ಇದೆ.
ನಾಳಿನ ಜನ್ಮಾಷ್ಟಮಿ ಹಾಗೂ ಸೋಮವಾರ ವಿಟ್ಲಪಿಂಡಿಗೆ ಈಗಾಗಲೇ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಮೊಸರು ಕುಡಿಕೆಗಾಗಿ ರಥಬೀದಿಯ ಸುತ್ತಲೂ ಅಲ್ಲಲ್ಲಿ 13 ಮರದ ಗುರ್ಜಿಗಳನ್ನು (ತ್ರಿಕೋನಾಕಾರದ) ಈಗಾಗಲೇ ನಿಲ್ಲಿಸಲಾಗಿದೆ. ಇದಕ್ಕೆ ಕಟ್ಟಿದ ಮಡಿಕೆಯಲ್ಲಿರಿಸಿದ ಮೊಸರು ಹಾಗೂ ಇತರ ವಸ್ತುಗಳನ್ನು ಗೊಲ್ಲ ವೇಷಧಾರಿಗಳು ಕೋಲಿನಿಂದ ಒಡೆಯುವುದೇ ಇಡೀ ಉತ್ಸವದ ಪ್ರದಾನ ಅಂಶ.
ನಾಳೆ ಉಡುಪಿಯಲ್ಲಿ ಬಾಲ ಕೃಷ್ಣರೇ ತುಂಬಿ ತುಳುಕಲಿದ್ದಾರೆ. ಮಠದ ವಿವಿಧ ಕಡೆಗಳಲ್ಲಿ ನಾಳೆ ಮಕ್ಕಳ ಕೃಷ್ಣ ವೇಷದ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ನೂರಾರು ಸಂಖ್ಯೆಯಲ್ಲಿ ಕೃಷ್ಣ -ರಾಧೆ ವೇಷಧಾರಿ ಮಕ್ಕಳು ಭಾಗವಹಿಸಲಿದ್ದಾರೆ.
ಕಳೆದ ತಿಂಗಳು ಚಾಂದ್ರಮಾನ ಯುಗಾದಿಯ ಕೃಷ್ಣಾಷ್ಟಮಿ ನಡೆದಿದ್ದರೆ, ನಾಳೆ ಮಠದಲ್ಲಿ ಸೌರಮಾನದ ಅಷ್ಟಮಿ ನಡೆಯಲಿದೆ. ಪರ್ಯಾಯ ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ಕಳೆದ 48 ದಿನಗಳಿಂದ ಮಂಡಲೋತ್ಸವದ ಮಾದರಿ ಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಇವುಗಳಿಗೆ ಶ್ರೀಕೃಷ್ಣ ಲೀಲೋತ್ಸವ ದೊಂದಿಗೆ ತೆರೆ ಬೀಳಲಿದೆ. ಸೋಮವಾರದ ಲೀಲೋತ್ಸವ ಅಪರಾಹ್ನ 3 ಗಂಟೆಗೆ ಪ್ರಾರಂಭಗೊಳ್ಳಲಿದೆ.







