ಮೃತ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ 1.45 ಕೋಟಿ ರೂ. ವಿಮಾ ಚೆಕ್ ಹಸ್ತಾಂತರ

ಉಡುಪಿ, ಆ.5: ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಿವಂಗತ ಪೊಲೀಸ್ ಕಾನ್ಸ್‌ಸ್ಟೇಬಲ್ ಅರ್ಜುನ ಶಂಕರ ನೆಲ್ಲೂರ ರವರ ಅವಲಂಬಿತರಿಗೆ ಎಸ್‌ಬಿಐ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ 1,45,00,000 ರೂ. ಮೊತ್ತದ ವಿಮಾ ಚೆಕ್‌ನ್ನು ಮಂಗಳವಾರ ಹಸ್ತಾಂತರಿಸಲಾಯಿತು.
2023-24ನೇ ಸಾಲಿನಲ್ಲಿ ಸಿ.ಎಸ್.ಪಿ. ಜಿಲ್ಲಾ ನಿಯಂತ್ರಣ ಕೊಠಡಿ, ಉಡುಪಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅರ್ಜುನ ನೆಲ್ಲೂರ, ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ.4ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಸ್‌ಬಿಐನ ಪ್ರಾದೇಶಿಕ ವ್ಯವಹಾರ ಕಚೇರಿಯ ರೀಜನಲ್ ಮ್ಯಾನೇಜರ್ ಬಿ.ಪ್ರಕಾಶ್ ಅಡಿಗ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸಮ್ಮುಖದಲ್ಲಿ ಮೃತ ಸಿಬ್ಬಂದಿಯ ಅವಲಂಬಿತರಿಗೆ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಸ್‌ಬಿಐನ ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್, ಮಲ್ಪೆ ಶಾಖೆಯ ಮೆನೇಜರ್ ರಾಜೇಶ್ ಗಂಗೊಳ್ಳಿ, ಅಧಿಕಾರಿಗಳಾದ ಶ್ರೀನಿವಾಸ್, ಪ್ರಣವ್ ಪೈ, ತನ್ಮಯ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮೃತ ಪೇದೆಯವರ ಕುಟುಂಬಸ್ಥರು ಉಪಸ್ಥಿತರಿದ್ದರು.




