ಅಡಿಕೆ, ಕಾಳುಮೆಣಸು ಬೆಳೆ ಪರಿಹಾರ 14.9 ಕೋಟಿ ರೂ.ಪಾವತಿ: 82 ಪ್ರಕರಣಗಳಲ್ಲಿ ಆಧಾರ್ ಜೋಡಣೆ ಅಡ್ಡಿ

ಉಡುಪಿ, ಡಿ.4: ತೋಟಗಾರಿಕೆ ಇಲಾಖೆಯ ವತಿಯಿಂದ 2022-23 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೈಂದೂರು ತಾಲೂಕಿನ 12 ಗ್ರಾಮಗಳಲ್ಲಿ ಅಡಿಕೆ ಬೆಳೆಯ 1064 ಪ್ರಕರಣಗಳಿಗೆ 380.72 ಲಕ್ಷ ರೂ., ಕಾಳುಮೆಣಸು ಬೆಳೆಯ 423 ಪ್ರಕರಣಗಳಿಗೆ 49.37 ಲಕ್ಷ ರೂ., ಕುಂದಾಪುರ ತಾಲೂಕಿನ 26 ಗ್ರಾಮದಲ್ಲಿ ಅಡಿಕೆ ಬೆಳೆಯ 3322 ಅಡಿಕೆ ಪ್ರಕರಣಗಳಿಗೆ 915 ಲಕ್ಷ ರೂ., ಕಾಳುಮೆಣಸು ಬೆಳೆಯ 833 ಪ್ರಕರಣಗಳಿಗೆ 110 ಲಕ್ಷ ರೂ. ಪರಿಹಾರ ಮೊತ್ತ ರೈತರ ಖಾತೆಗೆ ಪಾವತಿಯಾಗಿದೆ.
ಅದೇ ರೀತಿ ಹೆಬ್ರಿ ತಾಲೂಕಿನ ಬೆಳ್ವೆ ಮತ್ತು ಮಡಾಮಕ್ಕಿ ಗಾಮಗಳಲ್ಲಿ ಅಡಿಕೆ ಬೆಳೆಯ 83 ಪ್ರಕರಣಗಳಿಗೆ 34.49 ಲಕ್ಷ ರೂ., ಕಾಳುಮೆಣಸು ಬೆಳೆಯ 7 ಪ್ರಕರಣಗಳಿಗೆ 1.44 ಲಕ್ಷ ರೂ. ಸೇರಿ ಒಟ್ಟು ಅಡಿಕೆ ಬೆಳೆಯ 4469 ಪ್ರಕರಣಗಳಿಗೆ 1130.28 ಲಕ್ಷ ರೂ. ಹಾಗೂ ಕಾಳುಮೆಣಸು ಬೆಳೆಯ 1262 ಪ್ರಕರಣಗಳಿಗೆ 161.59 ಲಕ್ಷ ರೂ. ಸೇರಿದಂತೆ 5731 ಪ್ರಕರಣಗಳಲ್ಲಿ 1491.87 ಲಕ್ಷ ರೂ. ಗಳು ಪರಿಹಾರ ರೈತರ ಖಾತೆಗೆ ಪಾವತಿಯಾಗಿದೆ.
ಇದೇ ವೇಳೆ ಆಧಾರ್ ಜೋಡಣೆಯ ತಾಂತ್ರಿಕ ಸಮಸ್ಯೆಯಿಂದಾಗಿ ಒಟ್ಟು 82 ಪ್ರಕರಣಗಳಲ್ಲಿ 28.92 ಲಕ್ಷ ರೂ. ರೈತರ ಖಾತೆಗಳಿಗೆ ಪರಿಹಾರ ಪಾವತಿ ವಿಫಲವಾಗಿದ್ದು, ರೈತರು ಆಧಾರ್ ಜೋಡಣೆಯ ತಾಂತ್ರಿಕ ಸಮಸ್ಯೆಗಳನ್ನು ವಿಮಾ ಕಂತನ್ನು ಪಾವತಿಸಿದ ಬ್ಯಾಂಕ್ ಖಾತೆಗಳಿಗೆ ಭೇಟಿ ನೀಡಿ ಸರಿಪಡಿಸಿ ಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಕುಂದಾಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







